ವಿರೋಧ ಪಕ್ಷದವರ ಹೊಗಳಿಕೆಯೇ ಸರ್ಕಾರದ ಸಾಧನೆಯ ಕೈಗನ್ನಡಿ : ಶ್ರೀಮಂತ ಪಾಟೀಲ

ಕಾಗವಾಡ :ನ.16: ಕರ್ನಾಟಕದ ವಿರೋಧ ಪಕ್ಷದ ಮುಖಂಡರು ಕೂಡ ರಾಜ್ಯದ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಕಾರ್ಯವೈಖರಿಯನ್ನು ಮೆಚ್ಚಿ ಅವರನ್ನು ಹಾಡಿ ಹೊಗಳಿರುವುದು ಬಿಜೆಪಿ ಸರ್ಕಾರದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಮಂಗಳವಾರ ದಿ. 15 ರಂದು ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಪದವಿಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಶಿವಾನಂದ ಮಹಾವಿದ್ಯಾಲಯ ಕಾಗವಾಡ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 2022-23 ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಶೇಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯವಶ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಗೆಳಲ್ಲಿ ಭಾಗವಹಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ಇದೇ ಮೊಟ್ಟ ಮೊದಲು ಬಾರಿಗೆ ಉತ್ತರ ಕರ್ನಾಟಕದ ಗಡಿ ಭಾಗದಲ್ಲಿ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆ ಜರುಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು
ಈ ವೇಳೆ ಪ್ರಥಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿಯವರು ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರ ಕಾರ್ಯವನ್ನು ಮುಕ್ತ ಕಂಠದಿಂದ ಪಕ್ಷಾತೀತವಾಗಿ ಕೊಂಡಾಡಿದರು.
ಈ ಕ್ರೀಡಾಕೂಟದಲ್ಲಿ ರಾಜ್ಯದ 34 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಸತತ ಎರಡು ದಿನಗಳ ಕಾಲ ಈ ಕ್ರೀಡೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಮೊದಲಿಗೆ ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಶ್ರೀಮಂತ ಪಾಟೀಲ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ. ಯತೀಶ್ವರಾನಂದ ಶ್ರೀಗಳು, ಪ.ಪೂ. ಶ್ರದ್ಧಾನಂದ ಶ್ರೀಗಳು, ಪ.ಪೂ. ಶಿವದೇವ ಶ್ರೀಗಳು, ಪ.ಪೂ. ಆತ್ಮಾರಾಮ ಶ್ರೀಗಳು, ಪ.ಪೂ. ಶಂಕರಾನಂದ ಶ್ರೀಗಳು ವಹಿಸಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಚಾಲನೆ ನೀಡಲಾಯಿತು. ಈ ಸಮಯದಲ್ಲಿ ಚಿಕ್ಕೋಡಿಯ ಉಪನಿರ್ದೇಶಕ ಪಿ.ಐ. ಭಂಡಾರಿ, ಪ್ರಾಚಾರ್ಯ ಪಿ.ಬಿ. ನಂದಾಳೆ, ಬಿ.ಎ. ಪಾಟೀಲ, ವ್ಹಿ.ಎಸ್. ತುಗಶೆಟ್ಟಿ, ಮಧುಸುದನ ಬೀಳಗಿ, ಎ.ಬಿ. ಗುರಕ್ಕನವರ, ಅಜಯ ಮೋನೆ, ಎಸ್.ಎಸ್. ಸನದಿ, ಆರ್.ಎಸ್. ನಾಗರೆಡ್ಡಿ, ಅಮರ ಕೊರವಿ, ಶ್ರೀಮತಿ ಎಸ್.ಎಸ್. ಸಮಾಜೆ ಸೇರಿದಂತೆ ರಾಜ್ಯದ ಆಯಾ ಜಿಲ್ಲೆಗಳ ದೈಹಿಕ ಶಿಕ್ಷಕರು, ಕ್ರೀಡಾ ಸಂಯೋಜಕರು, ಕ್ರೀಡಾ ಪಟುಗಳು, ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರಕಾಶ ಹುಕ್ಕೇರಿಯವರು ವಿರೋಧ ಪಕ್ಷದಲ್ಲಿದ್ದರೂ ಸಹ ನಮ್ಮ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಕಾರ್ಯವೈಖರಿಯನ್ನು ಕೊಂಡಾಡಿರುವುದು, ನಮ್ಮ ಸರ್ಕಾರದ ಸಾಧನೆಗೆ ಹಿಡಿದ ಕೈಗನ್ನಡಿ ಇದು ಅವರೊಳಗಿನ ಕ್ರೀಡಾ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ. ಸಾಧನೆ ಮುಖ್ಯವಾಗಬೇಕು ಸಾಧನೆ ಮಾಡಿದವರನ್ನು ಮುಕ್ತ ಕಂಠದಿಂದ ಕೊಂಡಾಡಬೇಕು. ಅದರಂತೆ ನಮ್ಮ ಪ್ರಕಾಶ ಹುಕ್ಕೇರಿಯರು ನಮ್ಮ ಸಚಿವರನ್ನು ಕೊಂಡಾಡಿದ್ದಾರೆ. ಕರ್ನಾಟಕ ಸರ್ಕಾರ ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ಅತ್ಯಂತ ಮಹತ್ವ ನೀಡಿದೆ
ಶ್ರೀಮಂತ ಪಾಟೀಲ,