ವಿರೋಧ ಪಕ್ಷಗಳು ಟೀಕೆಗಾಗಿ ಟೀಕೆ ಮಾಡುತ್ತಾ ಕಾಲ ಕಳೆಯುತ್ತಿವೆ: ಡಾ.ಕೆ.ಸಿ.ಎನ್

ಕೆ.ಆರ್.ಪೇಟೆ. ಏ.01:- 1800 ಕೋಟಿ ಅನುದಾನ ತಂದು ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಿ ರೈತರು ಮತ್ತು ಜನಸಾಮಾನ್ಯರು ತಲತಲಾಂತರದವರೆಗೆ ನೆಮ್ಮದಿಯ ಜೀವನ ನಡೆಸಲು ಈ ಯೋಜನೆಯಿಂದ ಅವಕಾಶವಾಗಲಿದೆ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.
ವಿರೋಧ ಪಕ್ಷಗಳು ಟೀಕೆಗಾಗಿ ಟೀಕೆ ಮಾಡುತ್ತಾ ಕಾಲ ಕಳೆಯುತ್ತಿವೆ 1800 ಕೋಟಿ ಅನುಧಾನ ಬಂದಿರುವುದಕ್ಕೆ ಸೂಕ್ತ ದಾಖಲೆಯೊಂದಿಗೆ ಬಹಿರಂಗ ಚರ್ಚೆಗೆ ಸಿದ್ದವಾಗಿದ್ದೇನೆ ಎಂದು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸುಮ್ಮನೆ ಟೀಕಿಸುವ ಬದಲು ನಿಮ್ಮ ಕಾಲದ ಅಭಿವೃದ್ದಿ ಏನು ಎಂಬುದನ್ನು ತೋರಿಸಿ ಮತಯಾಚನೆ ಮಾಡಬೇಕೆ ಹೊರತು ನನ್ನನ್ನು ಟೀಕಿಸಿ ಮತಯಾಚಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಕಾಲದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಪ್ರಾಣದ ಹಂಗನ್ನು ತೊರೆದು ಜನ ಸಾಮಾನ್ಯರ ಜೀವವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನಮಾಡಿ ಯಶಸ್ವಿಯಾಗಿದ್ದೇನೆ.
ಇದಲ್ಲದೆ ನಮ್ಮ ತಾಲ್ಲೂಕಿನ ಸುಪುತ್ರ ಬಿ.ಎಸ್.ಯಡಿಯೂರಪ್ಪನವರು ಮಂಡ್ಯ ಜಿಲ್ಲೆಗೆ ಕೋವಿಡ್ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದರು. ನಂತರ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ತಾಲ್ಲೂಕಿನ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಪೂರ್ಣ ಸಹಕಾರ ನೀಡಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು ದೇಶವನ್ನು ಕೋವಿಡ್ ಸಂಕಷ್ಟದಲ್ಲಿ ಯಶಸ್ವಿಯಾಗಿ ಮುನ್ನಡೆಸಿ
ದೇಶದ 125ಕೋಟಿ ಜನಸಂಖ್ಯೆಗೆ ಕೋವಿಡ್ ವಿರುದ್ದ ಹೋರಾಡಲು ಉಚಿತ ವ್ಯಾಕ್ಸಿನ್ ಹಾಕಿಸುವ ಮೂಲಕ ದೇಶದ ಜನರ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಇಂತಹ ಡಬ್ಬಲ್ ಇಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ ಎಂಬುದನ್ನು ನಮ್ಮ ಎರಡೂ ಸರ್ಕಾರಗಳು ಸಾಬೀತು ಮಾಡಿವೆ ಎಂದರು.
ಮಂಡ್ಯ ಜಿಲ್ಲೆ ಕನಿಷ್ಟ 3 ರಿಂದ 4 ಸ್ಥಾನಗಳನ್ನು ಬಿಜೆಪಿ ಪಕ್ಷವು ಪಡೆಯುತ್ತದೆ. ಮುಂದೆಯೂ ನಮ್ಮ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಆಗ ಮಂಡ್ಯ ಜಿಲ್ಲೆಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಸಮಗ್ರ ಅಭಿವೃದ್ದಿಪಡಿಸಲು ನಾವೆಲ್ಲರೂ ದುಡಿಯುತ್ತೇವೆ ಎಂದು ನಾರಾಯಣಗೌಡ ತಿಳಿಸಿದರು.
ಕುಮಸರಸ್ವಾಮಿ ಅವರು 14 ತಿಂಗಳು ಮುಖ್ಯಮಂತ್ರಿಯಾಗಿ ಮಂಡ್ಯಕ್ಕೆ ಏನೂ ವಿಶೇಷ ಯೋಜನೆ ರೂಪಿಸಲಿಲ್ಲ. 2018ರಲ್ಲಿ ಏಳಕ್ಕೆ ಏಳು ಜೆಡಿಎಸ್ ಶಾಸಕರು ಇದ್ದರು ಅಭಿವೃದ್ದಿ ಮಾತ್ರ ಶೂನ್ಯವಾಯಿತು.
ಇದನ್ನು ಅರಿತು ತಾಲ್ಲೂಕಿನ ಅಭಿವೃದ್ದಿಗಾಗಿ ಬಿಜೆಪಿ ಪಕ್ಷವನ್ನು ಸೇರಬೇಕಾಯಿತು. ಜೆಡಿಎಸ್ ಪಕ್ಷದಲ್ಲಿ ಇದ್ದ ಉಸಿರು ಕಟ್ಟುವ ವಾತಾವರಣದಲ್ಲಿ ಇರಲು ಸಾಧ್ಯವಾಗದೇ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ನಮ್ಮ ತಾಲ್ಲೂಕಿನವರೇ ಆದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲೆಂಬ ಏಕೈಕ ಉದ್ದೇಶದಿಂದ ಬಿಜೆಪಿ ಸೇರಬೇಕಾಯಿತು. ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ತಾಲ್ಲೂಕಿನ ಅಭಿವೃದ್ದಿಗೆ ಸೂಕ್ತ ಅನುಧಾನ ನೀಡಿದ್ದರೆ ಜೆಡಿಎಸ್ ಬಿಡುತ್ತಿರಲಿಲ್ಲ ಎಂದು ತಿಳಿಸಿದರು.
ಕಳೆದ ಮೂರು ಚುನಾವಣೆಯಲ್ಲಿ ನನ್ನ ಗೆಲುವಿಗೆ ನನ್ನ ಕಾರ್ಯಕರ್ತರ ಪರಿಶ್ರಮದಿಂದ ಗೆದ್ದು ತಾಲ್ಲೂಕಿನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಇದರ ಬಗ್ಗೆ ಸಂಪೂರ್ಣ ತೃಪ್ತಿ ಇದೆ. ರಸ್ತೆ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ ಚುನಾವಣೆ ವೇಳೆ ಆ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ನಾರಾಯಣಗೌಡ ತಿಳಿಸಿದರು.
ಗೂಂಡಾಗಿರಿ ನಡೆಯಲ್ಲ:-ತಾಲೋಕಿನಲ್ಲಿ ಗೂಂಡಾಗಿರಿ ನಡೆಯಲು ಬಿಡಲ್ಲ ಇಂತಹ ಗೂಂಡಾಗಿರಿಗೆ ನಾನು ಹೆದರುವವನೂ ಅಲ್ಲ ಗೂಂಡಾಗಿರಿ ಮುಕ್ತ ತಾಲ್ಲೂಕು ಮಾಡಿ ತಾಲೂಕಿನ ಜನರ ರಕ್ಷಣೆ ಮಾಡುವುದೆ ನನ್ನ ಗುರಿ ಎಂದರು.
ಸಭೆಯಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿ.ಪಂ.ಮಾಜಿ ಉಪಾಧ್ಯಕ್ಷರಾದ ಎಸ್.ಅಂಬರೀಶ್, ಬೇಲದಕೆರೆ ಪಾಪೇಗೌಡ, ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಜಿ.ತಮಣ್ಣ, ಗೂಡೆಹೊಸಹಳ್ಳಿ ಜವರಾಯಿಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಕೊಡಗಹಳ್ಳಿ ಜಯರಾಮೇಗೌಡ, ಅಘಲಯ ಶ್ರೀಧರ್, ತಾ.ಪಂ.ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಪಿಎಲ್‍ಡಿ ಬ್ಯಾಂಕ್ ಮಾಜಿ ಅದ್ಯಕ್ಷ ರಾಮಕೃಷ್ಣೇಗೌಡ, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಮುಖಂಡರಾದ ಮಹಡಿಮನೆ ಮಂಜಣ್ಣ, ಬಿಲ್ಲೇನಹಳ್ಳಿ ಕುಮಾರ್, ಶೀರ್ ಬಿಲ್ಲೇನಹಳ್ಳಿ ಮಂಜುನಾಥ್, ಎ.ಪಿ.ಕೇಶವ, ಪುರಸಭಾ ಸದಸ್ಯರಾದ ಪ್ರಮೋದ್, ಕೆ.ಆರ್.ನೀಲಕಂಠ,ಮಾಜಿ ಸದಸ್ಯ ಕೆ.ವಿನೋದ್, ಸಚಿವರ ಆಪ್ತ ಸಹಾಯಕ ದಯಾನಂದ್, ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.