
ಭಾಲ್ಕಿ:ಮಾ.7: ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳು ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ. ನಾಲ್ಕುವರೇ ವರ್ಷಗಳ ನಂತರ ಈಗ ಕ್ಷೇತ್ರ ನೆನಪಾಗಿದೆ. ಇಷ್ಟು ವರ್ಷ ಎಲ್ಲಿಗೆ ಹೋಗಿದ್ದರು. ಜನ ಕೋವಿಡ್ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ವಿರೋಧಿಗಳು ಏನು ಮಾಡುತ್ತಿದ್ದರು ಎಂದು ಶಾಸಕ ಈಶ್ವರ ಖಂಡ್ರೆ ಪ್ರಶ್ನಿಸಿದರು.
ತಾಲೂಕಿನ ನಿಟ್ಟೂರ(ಬಿ) ಗ್ರಾಮದ ಶಿವಾಜಿ ವೃತ್ತದ ರಸ್ತೆಯಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
15 ವರ್ಷಗಳಿಂದ ಜನರ ಕಷ್ಟ ಸುಖಕ್ಕೆ ಸ್ಪಂದಿಸುತ್ತಿದ್ದೇನೆ. ಮಂತ್ರಿ ಸೇರಿ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಯಾರಿಂದಲೂ ಒಂದು ನಯಾ ಪೈಸೆ ಹಣ ಪಡೆದಿಲ್ಲ. ಆದರೆ, ಸರಕಾರ ಬದಲಾಗುತ್ತಲೇ ನನ್ನ ವಿರುದ್ಧ ಸೋಲು ಕಂಡ ವಿರೋಧಿಗಳು ವರ್ಗಾವಣೆಯನ್ನು ಧಂದೆಯನ್ನು ಮಾಡಿಕೊಂಡು ಎಲ್ಲ ಇಲಾಖೆಯ ಅಧಿಕಾರಿಗಳನ್ನು ವರ್ಗಾಯಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಡವರ ಮನೆ ಹಣಕ್ಕೂ ಕನ್ನ ಹಾಕಿದ್ದಾರೆ. ಇಂಥವರಿಂದ ಅಭಿವೃದ್ಧಿ ಅಸಾಧ್ಯ ಮತ ಕೇಳಲು ಬರುವ ವಿರೋಧಿಗಳನ್ನು ಕೂಡಿ ಹಾಕಿ ಪ್ರಶ್ನಿಸಿ ಎಂದು ತಿಳಿಸಿದರು.
ವಿರೋಧ ಪಕ್ಷದಲ್ಲಿದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನ ತಂದಿದ್ದೇನೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.ವಿರೋಧ ಪಕ್ಷದಲ್ಲಿದ್ದುಕೊಂಡು ವಿಧಾನ ಸಭೆಯಲ್ಲಿ ಒಳಗೂ, ಹೊರಗೂ ಹೋರಾಟ ನಡೆಸಿ ಸರಕಾರ ಮಟ್ಟದಲ್ಲಿ ಒತ್ತಡ ತಂದು ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕಿಂತ ನನ್ನ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿರುವುದು ಹೆಮ್ಮೆ ತರಿಸಿದೆ ಎಂದರು.
ಶಾಸಕ ರಹೀಮಖಾನ್ ಮಾತನಾಡಿ, ಭಾಲ್ಕಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಈಶ್ವರ ಖಂಡ್ರೆ ಅವರು ಹಗಲಿರಳು ಚಿಂತಿಸುತ್ತಿರುತ್ತಾರೆ. ಕ್ಷೇತ್ರದ ಎಲ್ಲ ವಲಯಗಳ ಅಭಿವೃದ್ದಿಗೆ ಭರಪೂರ ಅನುದಾನ ಒದಗಿಸಿದ್ದಾರೆ. ಹೀಗಾಗಿ ಈಶ್ವರ ಖಂಡ್ರೆ ಅವರು ನಾಲ್ಕನೇ ಬಾರಿಗೆ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು. ಶಾಸಕರ ಜನಬೆಂಬಲ ಕಂಡು ವಿರೋಧಿಗಳು ದಂಗಾಗಿದ್ದಾರೆ. ಅವರ ಮುಂದೆ ಚುನಾವಣೆ ನಿಲ್ಲಲು ಬಿಜೆಪಿ ಇದು ವರೆಗೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಯಾರೇ ಎದುರಾಳಿ ಬಂದರೂ ಕೂಡ ಶಾಸಕ ಖಂಡ್ರೆ ಅವರು 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪಾಂಡುರಂಗ ಕಣಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಮಾಶೆಟ್ಟೆ, ದತ್ತಾತ್ರಿ ಮೂಲಗೆ, ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಮೃತರಾವ ಚಿಮಕೋಡೆ, ಜಿಪಂ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್, ಮಾಜಿ ಸದಸ್ಯ ಅಂಬಾದಾಸ್ ಕೋರೆ, ಪ್ರಮುಖರಾದ ಅಶೋಕರಾವ ಸೋನಜೀ, ವಿಲಾಸ ಮಾಶೆಟ್ಟೆ, ವಿಜಯಕುಮಾರ ಪಾಟೀಲ್, ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರು ಹಾಜರಿದ್ದರು.
ಶ್ಯಾಮ ಪಾಟೀಲ್ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.
15 ಕಿ.ಮೀ.ಅದ್ಧೂರಿ ಮೆರವಣಿಗೆ
ಅಭಿನಂದನಾ ಸಮಾರಂಭಕ್ಕೂ ಮುನ್ನ ಶಾಸಕ ಈಶ್ವರ ಖಂಡ್ರೆ ಅವರನ್ನು 15 ಕಿ.ಮೀ.ಬೈಕ್ ರ್ಯಾಲಿ ಮೂಲಕ ಅದ್ಧೂರಿ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು. ಶಾಸಕರು ಕೋಟಗ್ಯಾಳ ಕ್ರಾಸ್‍ಗೆ ಬರುತ್ತಿದ್ದಂತೆಯೇ ಅಭಿಮಾನಿಗಳು, ಕಾರ್ಯಕರ್ತರು ಪುಷ್ಪವೃಷ್ಟಿ ಸುರಿದು ಸ್ವಾಗತ ಕೋರಿದರು. ಅಲ್ಲಿಂದ ಅಹ್ಮದಬಾದ್, ಕೇರೂರು, ಕೊಟಗ್ಯಾಳ ಮಾರ್ಗದ ಮೂಲಕ ನಿಟ್ಟೂರ ಗ್ರಾಮಕ್ಕೆ ಕರೆತರಲಾಯಿತು. ಪುದೀನಾ ಹಾರ, ಜೆಸಿಬಿ ಮೂಲಕ ಪುಷ್ಪವೃಷ್ಟಿ ಸುರಿಸಿ, ಪಟಾಕಿ ಸಿಡಿಸಿ ಜಯಘೋಷದೊಂದಿಗೆ ಶಾಸಕರನ್ನು ಮೆರವಣಿಗೆ ನಡೆಸಲಾಯಿತು.