ವಿರೋಧದ ನಡುವೆಯೇ ಗ್ರಾ.ಪಂ. ಕಟ್ಟಡ ಉದ್ಘಾಟನೆ


ಮುಂಡಗೋಡ,ಜೂ.14: ತಾಲೂಕಿನ ಕಾತೂರ ಗ್ರಾಮ ಪಂಚಾಯತಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ರದ್ದುಪಡಿಸಿ ಆದೇಶ ಹೊರಡಿಸಿದ ನಂತರವು ನೂತನ ಕಟ್ಟಡ ಉದ್ಘಾಟನೆಗೆ ಬಂದ ಶಾಸಕ ಶಿವರಾಮ ಹೆಬ್ಬಾರ್ ಅವರ ನಡೆಗೆ ಕಾಂಗ್ರೆಸ್ ಗ್ರಾ.ಪಂ. ಸದಸ್ಯರ, ಕಾರ್ಯಕರ್ತರ ವಿರೋಧದ ಮಧ್ಯೆಯೆ ಗ್ರಾ.ಪಂ. ನೂತನ ಕಟ್ಟಡವನ್ನು ಉದ್ಘಾಟನೆ ನಡೆಯಿತು.
ತಾಲೂಕಿನ ಕಾತೂರ ಗ್ರಾ.ಪಂ. ನೂತನ ಕಟ್ಟಡವನ್ನು ಉದ್ಘಾಟನಾ ಸಮಾರಂಭಕ್ಕೆ ಗ್ರಾ.ಪಂ ವತಿಯಿಂದ ಸಕಲ ಸಿದ್ದತೆಗಳನ್ನು ನಡೆಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಕಾರಣಾಂತರಗಳಿಂದ ಉದ್ಘಾಟನಾ ಸಮಾರಂಭವನ್ನು ರದ್ದುಪಡಿಸಿ ಮುಂದೂಡಲಾಗಿದೆ ಎಂದು ಕಾತೂರ ಗ್ರಾ.ಪಂ. ಪಿಡಿಓ ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ರಾ.ಪಂ ಸದಸ್ಯರು ಕಟ್ಟಡ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿ ಶಾಸಕ ಶಿವರಾಮ ಹೆಬ್ಬಾರ್ ವಿರುದ್ದ ಪ್ರತಿಭಟನೆ ನಡೆಸಿ ಘೋಷನೆ ಕೂಗಿದ್ದಾರೆ.
ನೂತನ ಗ್ರಾ.ಪಂ. ಉದ್ಘಾಟನೆಗೆ ಕೆಲ ಗ್ರಾ.ಪಂ ಸದಸ್ಯರು ವಿರೋಧ ಹಾಗೂ ಅಧಿಕಾರಿಗಳು, ಗ್ರಾ.ಪಂ. ಸಿಬ್ಬಂದಿಗಳ ಗೈರು ಹಾಜರಿಯಲ್ಲೆ ನೂತನ ಕಟ್ಟಡವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿ ಮಾತನಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಪ್ರತಿಭಟನೆ ನಡೆಸುವರೆಲ್ಲರೂ ಅಮಾಯಕರಾಗಿದ್ದು, ಇವರ ಹಿಂದೆ ಅಗೋಚರವಾದ ಕೆಲ ವ್ಯಕ್ತಿಗಳಿದ್ದಾರೆ. ಎದುರಿಗೆ ಬಂದು ಪ್ರತಿಭಟನೆ ಮಾಡಲು ಶಕ್ತಿ ಇಲ್ಲದವರು ಕೆಲವರನ್ನು ಪ್ರಚೋದನೆ ಕೊಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದವರು ಹೇಳಿದರು.
ನಾನು ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಈ ವೇಳೆ ವಿರೋಧ ಪಕ್ಷದಲ್ಲಿದ್ದ ಆರ್.ವಿ. ದೇಶಪಾಂಡೆ ಅವರ ಕ್ಷೇತ್ರದಲ್ಲಿ ಇಂತಹ ಅನೇಕ ಉದ್ಘಾಟನೆಗೆ ಅನುಮತಿ ನೀಡಿದ್ದೇನೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಬಳಿ ಮಾತನಾಡಿದ್ದೇನೆ. ಪ್ರೋಟೋಕಾಲ ಪ್ರಕಾರವೇ ಅವರ ಭಾವಚಿತ್ರವನ್ನು ಹಾಕಿ ಉದ್ಘಾಟನೆ ಮಾಡಿರುವುದಾಗಿ ಹೇಳಿದರು.
ಕಚೇರಿಗೆ ಬೀಗ: ಗಲಾಟೆಯ ಮಧ್ಯೆಯೆ ನೂತನ ಗ್ರಾ.ಪಂ. ಕಟ್ಟಡವನ್ನು ಶಾಸಕರು ಉದ್ಘಾಟಿಸಿ ನೂತನ ಕಾರ್ಯಾಲಯವನ್ನು ವಿಕ್ಷಣೆ ಮಾಡಿ ತೆರಳಿದರು. ಶಾಸಕರು ಗ್ರಾ.ಪಂ ಇಂದ ತೆರಳುತಿದ್ದಂತೆ ಕಾಂಗ್ರೆಸ್ ಮುಖಂಡ ಹನುಮಂತ ವಡ್ಡರ ಅವರ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯರು ಹಾಗೂ ಕಾರ್ಯಕರ್ತರು ಸೇರಿ ನೂತನವಾಗಿ ಉದ್ಘಾಟನೆಯಾದ ನೂತನ ಗ್ರಾ.ಪಂ. ಕಾರ್ಯಾಲಯಕ್ಕೆ ಬೀಗ ಹಾಕಲಾಯಿತು.
ಹೇಳಿಕೆ: ಸರಕಾರಿ ಅಧಿಕಾರಿಗಳ ಗೈರು ಹಾಜರಿಯಲ್ಲಿ ಕಾತೂರ ಗ್ರಾ.ಪಂ. ನೂತನ ಕಟ್ಟಡವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟನೆ ಮಾಡಿದ್ದಾರೆ. ಶಿಷ್ಟಾಚಾರದ ಪ್ರಕಾರ ಸರಕಾರಿ ಅಧಿಕಾರಿಗಳ ಸಮ್ಮಖದಲ್ಲಿ ಉದ್ಘಾಟನೆ ಮಾಡುವಂತೆ ಮನವಿ ಮಾಡಿದರೂ ಶಿಷ್ಟಾಚಾರ ಉಲ್ಲಂಘಿಸಿ ಉದ್ಘಾಟನೆ ಮಾಡಿದ್ದಾರೆ.
ಹನುಮಂತ ಬಿ.ವಡ್ಡರ. ಕಾಂಗ್ರೆಸ್ ಮುಖಂಡ