ಲಕ್ಷ್ಮೇಶ್ವರ,ಜೂ2 : ಪಟ್ಟಣದ ಪ್ರಮುಖ ರಸ್ತೆ ನಿರ್ಮಾಣ ಕಾಮಗಾರಿ ಹೊಸ ಬಸ್ ನಿಲ್ದಾಣದ ಎದುರಿಗೆ ಆರಂಭವಾಗಿದ್ದು ಒಂದು ಭಾಗದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಿ ಸವಣೂರು ಕ್ರಾಸ್ ವರೆಗೆ ಡಾಂಬರೀಕರಣ ಮಾಡಲಾಗಿದೆ.
ಆದರೆ ಈಗ ಅದರ ಪಕ್ಕದ ರಸ್ತೆಯನ್ನು ಕಾಮಗಾರಿಗಾಗಿ ಸಂಪೂರ್ಣ ಕಿತ್ತು ಹಾಕಲಾಗಿದ್ದು ಇದರಿಂದಾಗಿ ಸಾರಿಗೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪಿಎಸ್‍ಐ ಡಿ ಪ್ರಕಾಶ ಅವರು ಸ್ವತಃ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಹೊಸ ಬಸ್ ನಿಲ್ದಾಣದಿಂದ ಶಿಗ್ಲಿ ನಾಕಾದವರಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ವಾಹನ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಈ ರಸ್ತೆಯ ಗುತ್ತಿಗೆದಾರರು ಪೂರ್ವ ಸಿದ್ಧತೆಯಿಲ್ಲದೆ ಒಂದು ಪಕ್ಕದ ರಸ್ತೆಯನ್ನು ಏಕಾಏಕಿ ವಿರೂಪ ಗೊಳಿಸಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಲೋಕೋಪಯೋಗಿ ಇಲಾಖೆಯವರು ಕೂಡಲೇ ಮುತುವರ್ಜಿ ವಹಿಸಿ ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಸದಾ ಸಂಚಾರ ಒತ್ತಡದ ಈ ರಸ್ತೆಯನ್ನು ಕೂಡಲೆ ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಗೆ ವೇಗ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.