ವಿರಾಟ್‌ ಕೊಹ್ಲಿ ಪ್ರಸ್ತುತ ವಿಶ್ವದ ಬೆಸ್ಟ್ ಓಡಿಐ ಬ್ಯಾಟ್ಸ್‌ಮನ್‌: ಸ್ಟೀವನ್‌ ಸ್ಮಿತ್‌


ನವದೆಹಲಿ, ಸೆ. 10 -ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಓಡಿಐ ಮಾದರಿಯಲ್ಲಿ ಉತ್ತಮ ಬ್ಯಾಟ್ಸ್‌ಮನ್‌ ಆಯ್ಕೆ ಮಾಡುವುದು ಕಷ್ಟದ ಸಂಗತಿ. ಈ ವಿಷಯ ನಮ್ಮ ಕಿವಿಗೆ ಬಿದ್ದಾಗ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ನೆನಪಾಗುತ್ತಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಪ್ರಸ್ತುತ ವಿಶ್ವದ ಓಡಿಐ ಶ್ರೇಷ್ಠ ಬ್ಯಾಟ್ಸ್‌ಮನ್‌ ಅನ್ನು ಹೆಸರಿಸಿದ್ದಾರೆ. ಅವರು ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿದ್ದು, ಮೂರು ಪಂದ್ಯಗಳ ಓಡಿಐ ಸರಣಿ ಆಡಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ಇಂಗ್ಲೆಂಡ್‌ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು.

ಓಡಿಐ ಸರಣಿ ನಿಮಿತ್ತ ಆಸ್ಟ್ರೇಲಿಯಾ ತಂಡ ಸದ್ಯ ಜೈವಿಕ ಸುರಕ್ಷಿತ ವಾತಾವರಣದಲ್ಲಿದೆ. ಈ ವೇಳೆ ಸ್ಟೀವನ್‌ ಸ್ಮಿತ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗಾಗಿ ಪ್ರಶ್ನೋತ್ತರ ಅವಧಿಯನ್ನು ಏರ್ಪಡಿದ್ದರು. ಅಭಿಮಾನಿಗಳು ಬಲಗೈ ಬ್ಯಾಟ್ಸ್‌ಮನ್‌ಗೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟರು. ಈ ವೇಳೆ ಒಬ್ಬ ಅಭಿಮಾನಿ ಓಡಿಐ ಕ್ರಿಕೆಟ್‌ನಲ್ಲಿ ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಯಾರೆಂದು ಕೇಳಿದರು.

ಪ್ರಸ್ತುತ ವಿಶ್ವದ ಓಡಿಐ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಸ್ಟೀವನ್ ಸ್ಮಿತ್ ಹಾಗೂ ಹಲವಾರು ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ತಂಡ, ಓಡಿಐ ಸರಣಿ ಆಡಲು ಭಾರತಕ್ಕೆ ಪ್ರವಾಸ ಮಾಡಿತ್ತು. ಮೊದಲನೇ ಹಣಾಹಣಿಯಲ್ಲಿ ಸ್ಮಿತ್‌ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ನಂತರ ಇನ್ನುಳಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 98 ಹಾಗೂ 131 ರನ್‌ಗಳನ್ನು ಗಳಿಸಿದ್ದರು.

ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸ್ಟೀವನ್‌ ಸ್ಮಿತ್‌, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪ್ರಸ್ತುತ ವಿಶ್ವದ ಅತ್ಯುತ್ತಮ ಓಡಿಐ ಬ್ಯಾಟ್ಸ್‌ಮನ್‌ ಎಂದು ಉತ್ತರಿಸಿದರು. ಭಾರತದ ಆಟಗಾರ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಹಾಗೂ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಈಗಾಗಲೇ ಸ್ಥಾನ ಪಡೆದಿದ್ದಾರೆ. 50 ಓವರ್‌ಗಳ ಮಾದರಿಯಲ್ಲಿ ಕೊಹ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ 59.33ರ ಸರಾಸರಿಯಲ್ಲಿ ಓಡಿಐನಲ್ಲಿ 11,000 ರನ್‌ಗಳನ್ನು ಪೂರೈಸಿದ್ದಾರೆ.