ವಿರಕ್ತಮಠದಲ್ಲಿ ಅಥಣಿ ಶಿವಯೋಗಿಗಳವರ ಸ್ಮರಣೋತ್ಸವ

 ದಾವಣಗೆರೆ.ಏ.೨೯; ನಗರದ ವಿರಕ್ತಮಠದಲ್ಲಿ ಅಥಣಿ ಶಿವಯೋಗಿಗಳವರ ೧೦೦ನೇ ವರ್ಷದ ಸ್ಮರಣೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಶ್ರೀ ಬಸವಪ್ರಭು ಸ್ವಾಮೀಜಿಯವರು ಪುಷ್ಪಾರ್ಚನೆ ನೆರವೇರಿಸಿದರು ನಂತರ ಮಾತನಾಡಿದ ಶ್ರೀಗಳು  ಅಥಣಿ ಶಿವಯೋಗಿಗಳು ನಮ್ಮ ದೇಶ ಕಂಡ ಮಹಾನ್ ಶಿವಯೋಗಿಗಳು. ದೇಶದ ಯೋಗ ಪರಂಪರೆಯಲ್ಲಿ ಅಗ್ರಗಣ್ಯರಾಗಿದ್ದಾರೆ. ಶಿವಯೋಗ ಸಿದ್ಧಿಯನ್ನು ಸಂಪಾದಿಸಿ ಬಳಿ ಬಂದ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡಿದವರಾಗಿದ್ದಾರೆ.ಧಾರ್ಮಿಕ ಕ್ಷೇತ್ರದ ಮೌಂಟ್ ಎವರೆಸ್ಟ್ ಶಿಖರ ಅಥಣಿ ಮುರುಗೇಂದ್ರ ಶಿವಯೋಗಿಗಳು. ಅವರ ಮಹಿಮೆಯಿಂದ ಕಾವಿಬಟ್ಟೆಯನ್ನು ಧರಿಸಿದವರಿಗೆ ಗೌರವ ಸಿಗುತ್ತಿದೆ. ಸ್ವಾಮಿಯಾದರೆ ಮೃತ್ಯುಂಜಯ ಅಪ್ಪಗಳಂತೆ ಆಗಬೇಕು, ಜಗದ್ಗುರುಗಳಾದರೆ ಜಯದೇವ ಜಗದ್ಗುರುಗಳಂತೆ ಆಗಬೇಕು ,ಶಿವಯೋಗಿಯಾದರೆ ಅಥಣಿ ಶಿವಯೋಗಿಯಂತೆ ಆಗಬೇಕು ಎಂಬ ಮಾತು ಪ್ರಚಲಿತವಾಗಿದೆ. ಕಾರಣ ಅಂತಹ ಶ್ರೇಷ್ಠ ಬದುಕನ್ನು ಬಾಳಿದರು. ನಡೆನುಡಿಗಳ ಒಂದಾದ ಬದುಕು ಶಿವಯೋಗಿಗಳದ್ದು. ಅವರು ಎಂದು ಯಾರಿಗೂ ಭೋದನೆ ಮಾಡಲಿಲ್ಲ ತಮ್ಮ ನಿಜಾಚರಣೆಯ ಬದುಕಿನಿಂದ ಭೋಧಿಸಿದರು. ಅಂತಹ ಮಹಾತ್ಮರನ್ನು ಸ್ಮರಿಸೋಣ ಅವರ ಆದರ್ಶದ ದಾರಿಯಲ್ಲಿ ನಡೆಯೋಣ.ಮಹಾತ್ಮರನ್ನು ಸ್ಮರಿಸಿದರೆ ನಮಗೆ ಶಾಂತಿ ನೆಮ್ಮದಿ ಸಿಗುತ್ತದೆ ಕಾರಣ ತಮ್ಮ ಶಿವಯೋಗ ಸಾಧನೆಯಿಂದ ಆಧ್ಯಾತ್ಮಿಕ ಶಕ್ತಿಯನ್ನು ಪಡೆದಿರುತ್ತಾರೆ ಅಂತವರ ಹೆಸರುಗಳು ಮಂತ್ರಗಳಾಗುತ್ತವೆ. ಹಾಗಾಗಿ ನಾವು ಅವರನ್ನು ಸ್ಮರಣೆ ಮಾಡಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ. ಶಿವಯೋಗಿಗಳಿಗೆ ಬಸವಣ್ಣನವರೇ ಬಲ. ಬಸವತತ್ವಗಳನ್ನು ಪಾಲಿಸಿಕೊಂಡು ಬಂದು ಶ್ರೇಷ್ಠರು ಸರ್ವಜನರನ್ನು ಉದ್ದರಿಸಿದ ಒಬ್ಬ ಸಮಾಜಯೋಗಿಯಾಗಿದ್ದಾರೆ ಎಂದರು.ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಎಸ್.ಜೆ.ಎಂ.ಶಾಲೆಯ ಮುಖ್ಯ ಶಿಕ್ಷಕ ರೋಷನ್‌, ಪಾರುಖ್ , ಜಗದೀಶ್ , ಅಸಗೋಡ ಶಂಭಣ್ಣ , ಶಾಂತಕುಮಾರಿ ಇತರರು ಇದ್ದರು.