ವಿಮ್ಸ್ ನ ವಿಶೇಷ ಅಪಘಾತ ಆಸ್ಪತ್ರೆಯಲ್ಲಿ ಎಲುಬು, ಕೀಲು ದಿನಾಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.04: ವಿಮ್ಸ್ ನ ಟ್ರಾಮಾಕೇರ್ ಆಸ್ಪತ್ರೆಯ ಮೂಳೆ ಮತ್ತು ಕೀಲು ವಿಭಾಗ  ,ಭಾರತೀಯ ಆರ್ಥೋಪಿಡಿಕ್ ಸಂಘ,ರಾಜ್ಯ ಆರ್ಥೋಪಿಡಿಕ್ ಸಂಘ ಹಾಗೂ ಬಳ್ಳಾರಿ ಆರ್ಥೋಪಿಡಿಕ್ ಸೊಸೈಟಿ ಇವರ ಸಹಯೋಗದಲ್ಲಿ “ಎಲುಬು ಮತ್ತು ಕೀಲು ದಿನಾಚರಣೆ “ ಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಅಡಿಯಲ್ಲಿ ,ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸಿ ಎನ್ನವ ಧ್ಯೇಯವಾಕ್ಯದೊಂದಿಗೆ “ಪ್ರತಿಯೊಬ್ಬರು ಒಬ್ಬರ ಜೀವ ಉಳಿಸಿ”  ವಿಷಯದ ಮೇಲೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಮ್ಸ್ ನ ನಿರ್ದೇಶಕರಾದ ಡಾ.ಟಿ.ಗಂಗಾಧರ ಗೌಡ ಆಗಮಿಸಿದ್ದರು.ಮುಖ್ಯ ಉಪನ್ಯಾಸಕರಾಗಿ ರಾಜ್ಯ ಆರ್ಥೋಪಿಡಿಕ್ ಸಂಘದ ಅಧ್ಯಕ್ಷರಾದ ಡಾ.ಅಶ್ವಿನ್ ಕುಮಾರ್ ಸಿಂಗ್ , ಬಳ್ಳಾರಿ ಆರ್ಥೋಪಿಡಿಕ್ ಸೊಸೈಟಿಯ ಅಧ್ಯಕ್ಷರಾದ ಡಾ.ಶಶಿಧರ್ ರೆಡ್ಡಿ ,ಕಾರ್ಯದರ್ಶಿಗಳಾದ ಹಾಗು ಟ್ರಾಮಾಕೇರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಶಿವನಾಯ್ಕ್  ಅವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿರ್ದೇಶಕರು “ಟ್ರಾಮಕೇರ್ ಆಸ್ಪತ್ರೆ ಪ್ರಾರಂಭವಾದಾಗಿನಿಂದ  ಸುಮಾರು 1000 ಶಸ್ತ್ರಚಿಕಿತ್ಸೆಗಳನ್ನು ಟ್ರಾಮಾಕೇರ್ ಆಸ್ಪತ್ರೆಯಲ್ಲಿ  ಮಾಡಲಾಗಿದ್ದು ಯಾವುದೇ ಖಾಸಗಿ ಆಸ್ಪತ್ರೆಗೆ ಕಮ್ಮಿ ಇರದಂಥ ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ಒದಗಿಸಲಾಗುತ್ತಿದೆ. ಇಲ್ಲಿ ಮಾಡಿರುವ ಮೊಣಕಾಲು ಕೀಲು ಬದಲಿ ಹಾಗೂ ಸೊಂಟ ಕೀಲು ಬದಲಿ ಚಿಕೆತ್ಸೆಗಳನ್ನು ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಉಚಿತವಾಗಿ ಮಾಡಲಾಗಿದ್ದು ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು .ಇಂದಿನ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಸುಮಾರು ಅಪಘಾತಗೊಂಡ ಜನರ ಜೀವಗಳು ಅರಿವಿನ ಕೊರತೆಯಿಂದ ಹಾಗೂ ಭಯದಿಂದ ಹೋಗುತ್ತಿವೆ , ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಪ್ರಥಮ ಚಿಕಿತ್ಸೆ ನೀಡುವುದರಿಂದ ಹಲವಾರು ಪ್ರಾಣಗಳನ್ನು ಉಳಿಸಬಹುದು ,ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ಸಮಂಜಸ ಹಾಗೂ ಶ್ಲ್ಯಾಘನೀಯ ಎಂದು ಹೇಳಿದರು. ಡಾ .ಅಶ್ವಿನ್ ಕುಮಾರ್ ಸಿಂಗ್ ,ಡಾ.ಶಶಿಧರ ರೆಡ್ಡಿ ಹಾಗು ವಿಮ್ಸ್ ನ ಪ್ರಾಂಶುಪಾಲರಾದ ಡಾ.ಕೃಷ್ಣ ಸ್ವಾಮಿ ಕಾರ್ಯಕ್ರಮದ ಕುರಿತು ಮಾತನಾಡಿದರು.ವೇದಿಕೆಯಲ್ಲಿ ವಿಮ್ಸ್ ಆಸ್ಪತ್ರೆಯ ಪ್ರಭಾರಿ ವೈದ್ಯಕೀಯ ಅಧೀಕ್ಷಕರಾದ ಡಾ.ಗುರುಬಸವನ ಗೌಡ,ವೆಲ್ಲೆಸ್ಲಿ ಕ್ಷಯರೋಗ ಹಾಗು ಎದೆರೋಗ ಆಸ್ಪತ್ರೆಗಳ ಅಧೀಕ್ಷಕರಾದ ಡಾ.ಸುರೇಶ್ ಸಿ.ಎಂ, ಮೂಳೆ ಮತ್ತು ಕೀಲು ವಿಭಾಗದ ಪ್ರಭಾರಿ ಮುಖ್ಯಸ್ಥರಾದ ಡಾ.ವೆಂಕಟೇಶುಲು , ಅರವಳಿಕೆ ಶಾಸ್ತ್ರ ವಿಭಾಗದ ಡಾ.ಜಿ.ವಿ.ರಾವ್ ಉಪಸ್ಥಿತರಿದ್ದರು.ಡಾ.ಶಿವನಾಯ್ಕ್ ವಂದನಾರ್ಪಣೆ ಸಲ್ಲಿಸಿದರು.ಬಳ್ಳಾರಿಯ ಮೂಳೆ ತಜ್ಞರು,ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ಅಂಬುಲೆನ್ಸ್ ಚಾಲಕರು ,ಅರೆವೈದ್ಯಕೀಯ ಸಿಬ್ಬಂದಿಗಳು ,ಶುಶ್ರೂಷಕರು, ಶುಶ್ರೂಷಕ ವಿದ್ಯಾರ್ಥಿಗಳು, ಜನಸಾಮಾನ್ಯರು ಹಾಗೂ ಮಾಧ್ಯಮದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಭಾರತೀಯ ಆರ್ಥೋಪಿಡಿಕ್ ಸಂಘ ತಯಾರಿಸಿದ ಪ್ರಥಮ ಚಿಕಿತ್ಸಾ ವಿಧಾನಗಳ ವಿಡಿಯೋವನ್ನು ಪ್ರದರ್ಶಿಸಲಾಯಿತು.ಮೂಳೆ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.