ವಿಮ್ಸ್ ನಲ್ಲಿ ವಿದ್ಯುತ್ ವ್ಯತ್ಯಯದ ಸಾವು ಪ್ರಕರಣ
ತನಿಖೆಗೆ ಆಗಮಿಸಿದ ಸ್ಮಿತಾ ನೇತೃತ್ವದ ತಂಡ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:  ಇಲ್ಲಿನ ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಉಂಟಾದ ವ್ಯತ್ಯದಿಂದ ಹಲವರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿ ತನಿಖೆ ಮಾಡಲು ಸಮಿತಿ ಇಂದು ಆಘಮಿಸಿದೆ. ಮತ್ತೊಂದು ಕಡೆ ಜನ ಸೆ 14 ರಂದು ವಿಮ್ಸ್ ನಲ್ಲಿ ಸತ್ತವರೆಲ್ಲ ವಿದ್ಯುತ್ ವ್ಯತ್ಯದಿಂದ ಎಂದು ಹೇಳಿಕೆ ನೀಡುತ್ತಿದ್ದು ಇದರಿಂದ ಸತ್ತವರ ಸಂಖ್ಯೆ ಆರು ಆಗಿದೆ. ಈ ಮಧ್ಯೆ ಪ್ರತಿಪಕ್ಷಗಳು ಘಟನೆಯನ್ನು ತೀವ್ರವಾಗಿ ಕಂಡಿಸಿದ್ದರೆ. ಆಡಳಿತ ಪಕ್ಷದವರು ಮಾತ್ರ ಮೌನಿಗಳಾಗಿದ್ದಾರೆ. ಘಟನೆಗೆ ಕಾರಣ ಕೇಳಿ ನಿರ್ದೇಶಕರು ಕೆಳ ಹಂತದ ಸಿಬ್ಬಂದಿಗೆ ನೋಟೀಸ್ ಜಾರಿ ಮಾಡಿದ್ದಾರೆ. 
ಬೆಂಗಳೂರಿನ ಬಿಎಂಸಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕಿ ಡಾ.ಸ್ಮಿತಾ ನೇತೃತ್ವದಲ್ಲಿ ಸಮಿತಿಯ ಸದಸ್ಯರುಗಳಾದ  ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಡಾ.ಸಿದ್ದಿಕಿ ಅಹಮ್ಮದ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿ ಕೆ.ಎ.ಉಮಾ ಬಿಎಂಸಿ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದ ಪ್ರಾದ್ಯಾಪಕ ಡಾ.ದಿವಾಕರ್, ಆರೋಗ್ಯ ಇಲಾಖೆಯ ಕಾರ್ಯಪಾಲಕ ಇಂಜಿನೀಯರ್ ಶ್ರೀ ಯೋಗೇಶ್ ಅವರುಗಳ ತಂಡ. ವಿಮ್ಸ್  ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತದಿಂದಾದ ಉಂಟಾದ ಸಾವಿನ ಪ್ರಕರಣದ ತನಿಖೆ ಮಾಡಲು ಇಂದು ಆಗಮಿಸಿದೆ. ಆಸ್ಪತ್ರೆಗೆ ಆಗಮಿಸಿದ ತನಿಖಾ ಸಮಿತಿಯ ಸದಸ್ಯರು  ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಅವರೊಂದಿಗೆ  ಚರ್ಚೆ ನಡೆಸಿದರು.
ನಂತರ ಅವರು ವಿದ್ಯುತ್ ಕೇಬಲ್ ಬ್ಲ್ಯಾಸ್ಟ್ ಆಗಿರುವ ಸ್ಥಳ ಐಸಿಯು ವಾರ್ಡ್ ಅಲ್ಲದೆ ವಿಮ್ಸ್ ಆವರಣವನ್ನು ಪರಿಶೀಸಿದರು. ತಂಡದ ಪರಿಶೀಲನೆಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಅಲ್ಲಿದ್ದ ಜನತೆ ಘಟನೆಗೆ ಕಾರಣವೇನೆಂದು ತಿಳಿಸುವಂತೆ ಕೂಗುತ್ತಿದ್ದ ದೃಶ್ಯ ಕಂಡುಬಂತು.

 ನಾಲ್ವರಿಗೆ ನೋಟಿಸ್
ವೆಂಟಿಲೇಟರ್ ಕಾರ್ಯ ಸ್ಥಗಿತವಾಗಿ ಐಸಿಯುನಲ್ಲಿದ್ದ ಮೂವರು ರೋಗಿಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ವಿಮ್ಸ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ, ಅಧೀಕ್ಷ ಸೇರಿದಂತೆ ನಾಲ್ವರಿಗೆ  ನಿರ್ದೇಶಕ ಡಾ.ಗಂಗಾಧರ ಗೌಡ ನೋಟಿಸ್ ನೀಡಿದ್ದಾರೆ.
ಕರ್ತವ್ಯ ಲೋಪ ಆರೋಪದಡಿ ವಿಮ್ಸ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರವಿ ಭೀಮಪ್ಪ, ವಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯೋಗೇಶ್, ವಿಮ್ಸ್ ಆಸ್ಪತ್ರೆಯ ಡ್ಯೂಟಿ ಡಾಕ್ಟರ್. ಮಲ್ಲಿಕಾರ್ಜುನ , ನರ್ಸಿಂಗ್ ವಿಭಾಗದ ಅಧೀಕ್ಷಕಿ ನಾಗರತ್ನಗೆ ನೋಟಿಸ್ ನೀಡಲಾಗಿದೆ.

 ಸರ್ಕಾರದ ಪರಿಹಾರಕ್ಕಾಗಿ ಸುಳ್ಳು ಹೇಳಬೇಡಿ
ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಅವಘಡ ಹಿನ್ನಲೆ  ದಿನಕ್ಕೊಂದು  ಸಾವಿನ ವಿಡಿಯೋ ವೈರಲ್ ಹಿನ್ನೆಲೆವಿಮ್ಸ್ ನಿರ್ದೇಶಕ ಗಂಗಾಧರ್ ಗೌಡ ಎಚ್ಚರಿಕೆ ನೀಡಿದ್ದು. ಘಟನೆಯಲ್ಲಿ ಸಾವನ್ನಪ್ಪಿರುವುದು ಇಬ್ಬರು ಮಾತ್ರ. ನಂತರ ಇನ್ನೂ ಎರಡು ಮೂರ ಸಾವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದೆ. ನಕಲಿ ವಿಡಿಯೋ ಅಥವಾ ಪ್ರಕರಣಕ್ಕೆ ಸಂಬಂಧವಿಲ್ಲದ ವಿಡಿಯೋ ವೈರಲ್ ಮಾಡಿದ್ರೆ ಕ್ರಮ ಜರುಗಿಸಬೇಕಾಗುತ್ತದೆ.  ಸರ್ಕಾರದ ಪರಿಹಾರಕ್ಕಾಗಿ ಸುಳ್ಳು ಹೇಳಬೇಡಿ ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎರಡೇ ಸಾವಾಗಿರೋದು ಅದನ್ನು ತನಿಖೆ ಮಾಡ್ತಿದ್ದೇವೆ.
ಇನ್ನೂ ಕೇಬಲ್ ಬ್ಲಾಸ್ಟ್ ಆಗಿರೋ ಸ್ಥಳದಲ್ಲಿ ನೂತನ ಕೇಬಲ್ ಅಳವಡಿಕೆ ಮಾಡುತ್ತಿದೆ ಸಂಜೆಯೊಳಗೆ ಸಮರ್ಪಕ ವಿದ್ಯುತ್ ನೀಡೋ ಭರವಸೆಯನ್ನು  ನಿರ್ದೇಶಕ ಗಂಗಾಧರಗೌಡ ನೀಡಿದ್ದಾರೆ.

 5 ಲಕ್ಷ ರೂ ಪರಿಹಾರ ಘೋಷಣೆ:
ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ವೆಂಟಿಲೇಟರ್ ಕಾರ್ಯ ಸ್ಥಗಿತವಾಗಿ ಸಾವನ್ನಪ್ಪಿದ್ದ ಮೂವರು ರೋಗಿಗಳ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ವಿಮ್ಸ್‍ನಲ್ಲಿ ವಿದ್ಯುತ್ ಕೈಕೊಟ್ಟು, ಜನರೇಟರ್ ಕೆಲಸ ಮಾಡದೆ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ ಮೂವರು ರೋಗಿಗಳು ಮೃತಪಟ್ಟಿದ್ದರು. ಹಲವಾರು ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಘಟನೆಯಲ್ಲಿ ಹಾವು ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದ ಚೆಟ್ಟೆಮ್ಮ, ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೌಲಾ ಹುಸೇನ್ ಹಾಗೂ ಚೇಳು ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಳ್ಳಾರಿ ತಾಲೂಕಿನ ಜೋಳದರಾಶಿಯ ಮನೋಜ್ ಎಂಬವರು ಸಾವನ್ನಪ್ಪಿದ್ದರು.
ಈ ಘಟನೆ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇತ್ತ ವಿಧಾನಸಭೆ ಅಧಿವೇಶನದಲ್ಲಿವೂ ರೋಗಿಗಳ ಸಾವಿನ ಕುರಿತು ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಆರೋಪಗಳ ಮಳೆ ಸುರಿದಿದ್ದವು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

 ಈ ಬಾಲಕ ಸಹ ವಿಮ್ಸ್ ನಲ್ಲಿ ವಿದ್ಯುತ್ ವ್ಯತ್ಯಯದಿಂದ ಸತ್ತನಂತೆ
ಬಳ್ಳಾರಿ  ಜಿಲ್ಲೆಯ ಸಿರುಗುಪ್ಪ ನಗರದ  ಕೆ. ಮಹೇಶ ಎಂಬ 8 ವರ್ಷದ ನಿಖಿಲ್  ಎಂಬ ಮಗು ಸಹ ಬ ವಿಮ್ಸ್ ನಲ್ಲಿ ನಡೆದಿದೆ ಎಂದೇ ಹೇಳಲಾಗುತ್ತಿರುವ ವಿದ್ಯುತ್ ವ್ಯತ್ಯಯ ದಲ್ಲಿ ಮೃತನಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದರಿಂದಾಗಿ ಇದೀಗ ವಿಮ್ಸ್ ನಲ್ಲಿ  ವಿದ್ಯುತ್ ವ್ಯತ್ಯದಿಂದ ಸತ್ತವರು 4 ಜನ ಅಲ್ಲ 5 ಎನ್ನಲಾಗುತ್ತಿದೆ.
ಸಿರುಗುಪ್ಪ ನಿವಾಸಿ ಮಹೇಶ್ ಇವರ 3ಮಕ್ಕಳಲ್ಲಿ ಕೊನೆಯ ಮಗನಾಗಿದ್ದ  8 ವರ್ಷದ ನಿಖಿಲ್  ಡೆಂಗ್ಯೂ ಪೀಡಿತನಾಗಿದ್ದ. ಡೆಂಗಿ ಜ್ವರದಿಂದ ಬಳಲುತ್ತಿದ್ದ ಈತನನ್ನು ಭಾನುವಾರ
ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿತ್ತು. ಆದರೆ  ಬುಧವಾರ ಸೆ 14 ರ  ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕ ನಿಖಿಲ್‍ನ ತಾಯಿ ಈರಮ್ಮ ಅವರು ಆರೋಪ ಮಾಡುತ್ತಿತರುವ ಪ್ರಕಾರ ನನ್ನ ಮಗನನ್ನು ಐಸಿಯುದಲ್ಲಿ ಅಡ್ಮಿಟ್ ಮಾಡಿದ್ದೆವು, ವೆಂಟಿಲೇಟರ್ ಮೇಲೆ ನನ್ನ ಮಗ ಇದ್ದ, ಆದರೆ ನಿನ್ನೆ ಬೆಳಿಗ್ಗೆ ಕರೆಂಟ್ ಹೋದಾಗ ಮಶೀನ್‍ಗಳೆಲ್ಲ ಬಂದ್ ಆದವು, ಇದು ಯಾಕೆ ಹೀಗೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು, ಕರೆಂಟ ಹೋಗಿದೆ ಎಂದರು, ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ ಎಂದಿದ್ದಾರೆ.
ಈ ಮೂಲಕ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ಮೃತರಾದವರು ಎಷ್ಟು ಜನ? ಎಂಬ ಪ್ರಶ್ನೆ ಇದೀಗ  ಉದ್ಭವವಾಗಿದೆ.
ಆದರೆ ಮಕ್ಕಳ ವಿಭಾಗದ ಐಸಿಯುನಲ್ಲಿ ವಿದ್ಯುತ್ ವ್ಯತ್ಯಯ ಆಗಿಲ್ಲ. ಆ ಮಗು ಸಾವು ಕಾಯಿಲೆ ಗುಣ ಆಗದೆ ಆಗಿದೆ. ಸಿಎಂ ಪರಿಹಾರ ಘೋಷಣೆ ಮಾಡಿದ ಮೇಲೆ ಈ ರೀತಿ ಹೇಳಲಾಗುತ್ತಿದೆ ಎಂದು ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ ಹೇಳಿದ್ದಾರೆ.
ಸಾವುಗಳ ಕುರಿತು ಈಗಾಗಲೇ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದ್ದು, ಸತ್ಯ ಏನೆಂದು ತನಿಖೆಯಿಂದ ಹೊರ ಬರಬೇಕಿದೆ.

 ಗುಗರಹಟ್ಟಿಯ  ಮಂಜುನಾಥ್ ಸಾವು:
ಬಳ್ಳಾರಿ: ಇಲ್ಲಿನ  ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟು ವೆಂಟಿಲೇಟರ್ ಸಮಸ್ಯೆಯಿಂದ ಐಸಿಯುನಲ್ಲಿದ್ದ ಮೂವರು ಮೃತಪಟ್ಟಿದ್ದು. ಇದಕ್ಕೆ  ಆಡಳಿತಾಧಿಕಾರಿಗಳ ಬೇಜವಾಬ್ದಾರಿತನ ಎತ್ತಿ ಹಿಡಿಯುವಂತಿದೆ ಇಂತಹ ನಿರ್ಲಕ್ಷ್ಯತೆಯನ್ನು ತೋರುತ್ತಿರುವ ನಿರ್ದೇಶಕರು, ಕೂಡಲೇ ರಾಜಿನಾಮೆ ನೀಡಲು  ಕಾಂಗ್ರೆಸ್ ಪಕ್ಷದ  ಅಸಂಘಟಿತ ಕಾರ್ಮಿಕ ಮತ್ತು ನೌಕರರ ಘಟಕ ಒತ್ತಾಯಿಸಿದೆ. ಘಟಕದ ಜಿಲ್ಲಾ ಅಧ್ಯಕ್ಷ ಅಲಿವೇಲು ಸುರೇಶ್, ಪತ್ರಿಕಾ ಹೇಳಿಕೆ ನೀಡಿ.
ವಿದ್ಯುತ್ ವ್ಯತ್ಯದಿಂದ ಸತ್ತವರು  ಕೇವಲ ಇಬ್ಬರು,  ಮೂವರು ಎಂದು ಹೇಳುತ್ತಿದ್ದಾರೆ ಅಧಿಕಾರಿಗಳು.  ಅವರಲ್ಲದೆ ಗಾದಿಲಿಂಗೇಶ್ವರ ಟ್ರಾನ್ಸ್ ಪೆÇೀರ್ಟ್ ನ ನೌಕರ ಗುಗರಹಟ್ಟಿ ಪ್ರದೇಶದ ಮಂಜುನಾಥ್ ಎನ್ನುವವರು ಅಂದಿನ ದಿನವೇ ಅಧಿಕಾರಿಗಳ ಮತ್ತು ವೈದ್ಯರ  ನಿರ್ಲಕ್ಷ್ಯತೆಯಿಂದ ವೆಂಟಿಲೇಟರ್ ಸಮಸ್ಯೆಯಿಂದ ಸಾವನ್ನಪ್ಪಿರುವುದು ದುರದೃಷ್ಟಕರವಾಗಿದೆ. ಇಂತಹ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಿ ವೈದ್ಯರ ನಿರ್ಲಕ್ಷ್ಯದ ಜತೆಗೆ ಪ್ರಾಣ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಸರ್ಕಾರ ರಲ್ಲಿ ಒತ್ತಾಯಿಸುತ್ತೇನೆ ಎಂದಿದ್ದಾರೆ.

 ನಾರಾ ಭರತ್ ರೆಡ್ಡಿ ಖಂಡನೆ
ಬಳ್ಳಾರಿ ಜಿಲ್ಲೆಯ ವಿಜಯನಗರ ವೈದ್ಯಕೀಯ ವಿಜ್ಞಾನ  (ವಿಮ್ಸ್) ಸಂಸ್ಥೆಯ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ವಿದ್ಯುತ್ ಕೈಕೊಟ್ಟು, ಜನರೇಟರ್ ಕೆಲಸ ಮಾಡದೆ  ತೀವ್ರ ನಿಗಾ ಘಟಕ (ಐಸಿಯು) ನಲ್ಲಿ  ಮೂವರು ಮೃತಪಟ್ಟಿದ್ದಾರೆ.
ಇದಕ್ಕೆ  ವಿಮ್ಸ್ ನ  ಆಡಳಿತಾಧಿಕಾರಿಗಳ ಬೇಜವಾಬ್ದಾರಿ ಮತ್ತು ಅಸಮರ್ಥತೆಯನ್ನು ನಾನು ತೀವ್ರವಾಗಿ ಖಂಡಿಸುತ್ತೆನೆಂದು ಕಾಂಗ್ರೆಸ್ ಯುವ ಮುಖಂಡ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.
ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುವ  ಸರ್ಕಾರದ  ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಮತ್ತು ಅದಕ್ಕೆ ಪರ್ಯಾಯವಾಗಿರುವ ಜನರೇಟರ್ ಕೆಲಸ ಮಾಡಿಲ್ಲ ಅಂದರೆ ಇದು ಆರೋಗ್ಯ ಇಲಾಖೆಗೆ ನಾಚಿಕೆಗೇಡಿನ ಸಂಗತಿ,  ಇದರಿಂದ  ನಿಗಾ ಘಟಕದಲ್ಲಿದ್ದ ಮೂವರು  ಮೃತರಾಗಿದ್ದಾರೆ.
ಅಧಿಕಾರಿಗಳ  ಕಾರ್ಯವೈಖರಿಯನ್ನು ಗಮನಿಸಬೇಕಾದ ಆರೋಗ್ಯ ಇಲಾಖೆ ಮಂತ್ರಿಗಳು ಜನಸಾಮಾನ್ಯರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಾಣುತ್ತಿದೆಂದು ಆರೋಪಿಸಿದ್ದಾರೆ.
ಸರ್ಕಾರದಿಂದ ಕೋಟಿ ಗಟ್ಟಲೆ ಹಣವನ್ನು ಮಂಜೂರು ಆಗುತ್ತಿದ್ದರೂ,    ಐಸಿಯುನಲ್ಲಿದ ಜನರೇಟರ್ ಅನ್ನು  ವ್ಯವಸ್ಥಿತವಾಗಿ ನಿಭಾಯಿಸುತ್ತಿಲ್ಲ, ಅಂದರೆ ಇಲ್ಲಿಯೂ 40% ಸರ್ಕಾರದ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗುತ್ತದೆಂದಿದ್ದಾರೆ.
ಈ ಘಟನೆ ಸಂಬಂಧ ಯಾರು ತಪ್ಪಿತಸ್ಥರೋ ಅವರನ್ನು ಕೂಡಲೇ ಅಮಾನತು ಮಾಡಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಹಾಗೂ ಮೃತರಾದವಾರಿಗೆ ಪರಿಹಾರ ನೀಡಬೇಕು ಮತ್ತು ಇಂತಹಾ ಘಟನೆಗಳು ಮರುಕಳಿಸದಂತೆ ನೊಡಿಕೋಳ್ಳಬೇಕು ಎಂದಿದ್ದಾರೆ.

 ಅಲ್ಲಂ ಪ್ರಶಾಂತ್ ಅಗ್ರಹ
ಬಳ್ಳಾರಿ ಜಿಲ್ಲೆಯ ವಿಜಯನಗರ ವೈದ್ಯಕೀಯ ವಿಜ್ಞಾನ  (ವಿಮ್ಸ್) ಸಂಸ್ಥೆಯ ಆಸ್ಪತ್ರೆಯಲ್ಲಿ  ವಿದ್ಯುತ್ ಕೈಕೊಟ್ಟು,   ತೀವ್ರ ನಿಗಾ ಘಟಕ (ಐಸಿಯು) ನಲ್ಲಿ  ಮೂವರು ಮೃತಪಟ್ಟಿದ್ದಾರೆ ಎನ್ನಲಾದ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಜಿಪಂ ಮಾಜಿ ಸದಸ್ಯ ಅಲ್ಲಂ ಪ್ರಶಾಂತ್ ರಾಜ್ಯ ಸರ್ಕಾರಕ್ಕೆ ಅಸಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು.  ವಿದ್ಯುತ್ ಕೇಬಲ್ ಹಾಳಾಗಿದೆ ಎಂಬುದು ಗಮಕ್ಕಿದ್ದರೂ, ವಿಮ್ಸ್ ನ  ಆಡಳಿತಾಧಿಕಾರಿಗಳ ಬೇಜವಾಬ್ದಾರಿ ಮತ್ತು ಅಸಮರ್ಥತೆಯಿಂದ ಜನರೇಟರ್ ವ್ಯವಸ್ಥೆ ಮಾಡದೆ. ಹಲವರ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ.
ಈ ಘಟನೆಗೆ ಮೊದಲು ನಾನು ಸಂತಾಪ ವ್ಯಕ್ತಪಡಿಸಿ ವಿಮ್ಸ್ ನ ನಿರ್ಲಕ್ಷವನ್ನು  ಖಂಡಿಸುತ್ತೆನೆಂದು  ಹೇಳಿದ್ದಾರೆ.
ಸರ್ಕಾರ ಕೋಟಿ ಗಟ್ಟಲೆ ಹಣವನ್ನು ಆರೋಗ್ಯ ವ್ಯವಸ್ಥೆಗೆ ಮಂಜೂರು ಆಗುತ್ತಿದ್ದರೂ,    ಐಸಿಯುನಲ್ಲಿದ ಜನರಿಗೆ ಜನರೇಟರ್ ಅನ್ನು  ವ್ಯವಸ್ಥಿತವಾಗಿ ಮಾಡಲು ಆಗಿಲ್ಲ ಎಂದರೆ ಇದು ನಿರಗಲಕ್ಷದ ಪರಮಾವಧಿಯಲ್ಲದೆ ಬೇರೇನು ಅಲ್ಲ. ಈ ಬಗ್ಗೆ ತನಿಖೆಗೆ ನೇಮಿಸಿರುವ ಸಮಿತಿ ಸತ್ಯಂಶದಿಂದ ಕೂಡಿದ ವರದಿ ನೀಡಿ. ತಪ್ಪಿತಸ್ಥರ ಮೇಲೆ ಕಾನೂನು ರೀತಿ ಕ್ರಮ ಆಗಬೇಕು  ಎಂದಿದ್ದಾರೆ.

 ಪಾರದರ್ಶಕ ತನಿಕೆಗೆ ಮನವಿ:
ನಗರದ ಶ್ರೀ ರಕ್ಷಾ ಫೌಂಡೇಶನ್ ಸಂಸ್ಥಾಪಕ ರಾವೂರು ಸುನೀಲ್ ಅವರು ಈ ದಿನ ಬೆಂಗಳೂರುನಿಂದ ಬಳ್ಳಾರಿಗೆ  ವೈದ್ಯಕೀಯ ಸಚಿವಾಲಯದಿಂದ ಬಂದಿದ್ದ  ಸ್ಮೀತ ಹಾಗೂ ಅವರ ನೇತೃತ್ವದ ತಂಡದ ಸದಸ್ಯರನ್ನು ಭೇಟೆ ಮಾಡಿ ವಿಮ್ಸ್  ಆಸ್ಪತ್ರೆಯಲ್ಲಿ ಉಂಟಾದ ರೋಗಿಗಳ ದುರಂತ ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದರು.
ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ ವಿರೋದ ಪಕ್ಷದ ನಾಯಕ  ಸಿದ್ದರಾಮಯ್ಯನವರು ಈ ಬಗ್ಗೆ ಪ್ರಸ್ತಾಪಿಸಿದ್ದು ತಂಡದ ಗಮನಕ್ಕೆ ತಂದರು.

 25 ಲಕ್ಷ ರೂ ಪರಿಹಾರಕ್ಕೆ, ಜೆಡಿಎಸ್ ಒತ್ತಾಯ   
ಬಳ್ಳಾರಿ:ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡು ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಮೂವರ ಕುಟುಂಗಳಿಗೆ ಸರ್ಕಾರ ಕೂಡಲೇ 25ಲಕ್ಷ ರೂ.ಪರಿಹಾರ ನೀಡಬೇಕು, ನಿರ್ಲಕ್ಷ್ಯ ವಹಿಸಿದ ವಿಮ್ಸ್ ನಿರ್ದೇಶಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿಮ್ಸ್ ನಲ್ಲಿ ನಡೆದ ಈ ದುರಂತ ನಿಜಕ್ಕೂ ಖಂಡನೀಯ, ಇದರ ಸಂಪೂರ್ಣ ಹೊಣೆಯನ್ನು ಜಿಲ್ಲಾಡಳಿತ ಹಾಗೂ ವಿಮ್ಸ್ ಮಂಡಳಿ ಹೊರಬೇಕು, ಈ ಪ್ರಕರಣವನ್ನು ಕೂಡಲೇ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು,
ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದೇ ಈ ಘಟನೆಗೆ ಕಾರಣವಾಗಿದೆ, ಅಧಿಕಾರಿಗಳು ಮಾತ್ರ ವಿದ್ಯುತ್ ಕಡಿತಗೊಂಡಿದ್ದಲ್ಲ, ಪರ್ಯಾಯವಾಗಿ ಜನರೆಟರ್ ಇರಲಿದೆ, ಮೂವರು ಮೃತಪಟ್ಟಿದ್ದು, ನಾನಾ ಕಾರಣಗಳಿಂದ ಎಂದು ವೈದ್ಯರು ತಿಳಿಸಿದರೇ, ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಬಿ.ಶ್ರೀರಾಮುಲು ಅವರೂ ಅದನ್ನೇ ಹೇಳುತ್ತಿದ್ದಾರೆ, ಈ ರೀತಿ ಆದರೇ, ಬಡ ಜನರ ಪಾಡೇನು ಎಂದು ಪ್ರಶ್ನಿಸಿದ್ದಾರೆ. ಈ ಘಟನೆ ಕುರಿತು ಸರ್ಕಾರ ಸಂಪೂರ್ಣ ತನಿಖೆ ನಡೆಸಬೇಕು, ವಿಮ್ಸ್ ನಲ್ಲಿ ಇಂತಹ ಅವಘಡಗಳು ಮತ್ತೆ ಮರುಕಳಿಸದಂತೆ ಅಗತ್ಯ ಕ್ರಮಕೈಗೊಳ್ಳಬೇಕು, ನಿರ್ಲಕ್ಷಿಸಿದರೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮೀನಳ್ಳಿ ತಾಯಣ್ಣ ಎಚ್ಚರಿಸಿದ್ದಾರೆ.