ವಿಮ್ಸ್ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಾಸಿರ್ ಹುಸೇನ್ ಒತ್ತಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಸೆ.17: ಇಲ್ಲಿನ  ವಿಮ್ಸ್‌ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯದಿಂದ  ಮೂವರು ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ರಾಜ್ಯಸಭಾ ಸದಸ್ಯ ಡಾ||ಸೈಯದ್ ನಾಸಿರ್ ಹುಸೇನ್ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು.
ವಿಮ್ಸ್ ಆಸ್ಪತ್ರೆಗೆ ದಿನನಿತ್ಯ ಜಿಲ್ಲೆಯ ಇತರೆ ಪ್ರದೇಶಗಳಿಂದ ಮತ್ತು ಪಕ್ಕದ ಆಂಧ್ರಪ್ರದೇಶ ರಾಜ್ಯದಿಂದ ರೈತರು, ಕೂಲಿ ಕಾರ್ಮಿಕರು ಮತ್ತು ಬಡ ನಾಗರೀಕರು  ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಗಮಿಸುತ್ತಾರೆ.
ಆದರೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟ‌ರ್  ಕಾರ್ಯ ಸ್ಥಗಿತಗೊಂಡು ಮೂವರು ಮೃತಪಟ್ಟಿರುವ ದುರ್ಘಟನೆ ನಿಜಕ್ಕೂ ದುಃಖಕರ. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಕೋಟಿಗಟ್ಟಲೆ ಅನುದಾನ, ವೈದ್ಯಕೀಯ ಉಪಕರಣಗಳು ಮತ್ತು ಇನ್ನಿತರೆ ಅವಶ್ಯಕ ಸಲಕರಣೆಗಳು ನೀಡಿದ್ದಾಗ್ಯೂ ರೋಗಿಗಳನ್ನು ಸಂರಕ್ಷಿಸಲು ಆಸ್ಪತ್ರೆಯ ಸಿಬ್ಬಂದಿ,  ಆಡಳಿತ ಮಂಡಳಿಯು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಮ್ಮೆ ಇಂತಹ ದುರ್ಘಟನೆಗಳು ಸಂಭವಿಸದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಹಾಗೂ ಈ ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿದ  ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ತನಿಖೆಯನ್ನು ಜರುಗಿಸಿ. ಅವರನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು  ಅವರು ಒತ್ತಾಯಿಸಿದ್ದಾರೆ.