ವಿಮ್ಸ್‍ನಲ್ಲಿ ವಿಶ್ವಬಾಯಿಯ ಸ್ವಚ್ಛತಾ ದಿನ ಆಚರಣೆ


ಬಳ್ಲಾರಿ,ಆ.03: ವಸಡಾ ಶಾಸ್ತ್ರದ ಪಿತಾಮಹರೆಂದೇ ಖ್ಯಾತರಾದ ಡಾ.ಶಂಕ್ರಲ್ಕರ್ ಅವರ ಜನ್ಮ ದಿನ ಪ್ರಯುಕ್ತ ಹಾಗೂ ಬಾಯಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಜೊತೆಗೆ ಹೇಗೆ ಬಾಯಿ ಸ್ವಚ್ಛತೆ ಕಾಪಾಡುವುದರಿಂದ ಇತರೆ ಬಾಯಿಯ ರೋಗಗಳನ್ನು ತಡೆಗಟ್ಟಬಹುದು ಎಂಬುದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಮ್ಸ್‍ನ ವೈದ್ಯ ಭವನದಲ್ಲಿ ವಿಶ್ವಬಾಯಿ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ವಿಮ್ಸ್ ನಿರ್ದೇಶಕರಾದ ಡಾ.ಟಿ.ಗಂಗಾಧರ ಗೌಡ ಅವರು  ಹೇಗೆ ಬಾಯಿಯ ಆರೋಗ್ಯ ಹಲ್ಲಿನ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ತಿಳಿಸಿಕೊಟ್ಟರು.
2021ರಲ್ಲಿ ವಿಶ್ವ ದಂತ ತಜ್ಞರ ಹಾಗೂ ಭಾರತೀಯ ದಂತ ವೈದ್ಯರ ಸಂಘದ ಸಹಯೋಗದೊಂದಿಗೆ “ನಿಮ್ಮ ಬಾಯಿಯ ಸ್ವಚ್ಛತೆ ಬಗ್ಗೆ ಹೆಮ್ಮೆ ಇರಲಿ” ಎನ್ನುವ 3 ವರ್ಷಗಳ ಅಭಿಯಾನವನ್ನು ಆರಂಭಿಸಲಾಗಿತ್ತು. 2022ನೇ ವರ್ಷದ ಅಭಿಯಾನ ನಮ್ಮ ಬಾಯಿಯ ಆರೋಗ್ಯ ಮತ್ತು ಜೀವನದ ಸಂತೋಷ ಎರಡರ ನಡುವಿನ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದರು.
ಬೆಂಗಳೂರಿನ ದಂತ ಕಾಲೇಜಿನ ವಸಡು ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ.ಮೊಹಮ್ಮದ್ ಫೆಜುದ್ದೀನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನ ದಂತ ವೈದ್ಯರಾದ ಡಾ.ಲಲಿತ್ ವಿವೇಕಾನಂದ ಅವರು ವಸಡು ಶಸ್ತ್ರ ಚಿಕಿತ್ಸೆಗಳ ಬಗ್ಗೆ ಹಾಗೂ ಡಾ.ಕೆ.ಸದಾನಂದ ಅವರು ರಾಷ್ಟ್ರೀಯ ಬಾಯಿ ಆರೋಗ್ಯದ ಪ್ರಾಮುಖ್ಯತೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಬಳ್ಳಾರಿ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಳ್ಳಾರಿ ದಂತ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ.ದಿವಾಕರ್.ಎಸ್, ಭಾರತೀಯ ದಂತ ವೈದ್ಯ ಸಂಘ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಡಾ.ವಾಣಿಶ್ರೀ ಹಾಗೂ ಕನ್ಸ್‍ರ್ವೇಟಿವ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರು ಹಾಗೂ ಮಾಜಿ ಪ್ರಾಧ್ಯಾಪಕರಾದ ಡಾ.ಭಾರತಿ ಡಿಯೋ, ವಿಮ್ಸ್‍ನ ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ, ಡಾ.ಹನುಮಂತ ಕುಮಾರ್, ಡಾ.ಶ್ವೇತಾ, ಡಾ.ರಾಧಿಕ ಕೆ.ಬಿ ಸೇರಿದಂತೆ ದಂತವೈದ್ಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವೈದ್ಯರು ಉಪಸ್ಥಿತರಿದ್ದರು.