ವಿಮೋಚನಾ ಹೋರಾಟಗಾರ ಶಾಮರಾವ ಕುಲಕರ್ಣಿ ಕೋಣ ಸಿರಸಗಿ ನಿಧನ- ಡಾ. ಅಜಯ್ ಸಿಂಗ್ ಕಂಬನಿ

ಕಲಬುರಗಿ,ನ.2: ಬುಧವಾರ ನಿಧನರಾಗಿರುವ ದೇಶದ ಸ್ವಾತಂತ್ರ್ಯ ಹಾಗೂ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ ಶಾಮರಾವ ಕುಲಕರ್ಣಿ ಕೋಣಶಿರಸಗಿ (98) ಇವರ ನಿಧನಕ್ಕೆ ವಿದಾನಸಬೆ ವಿರೋಧ ಪಕ್ಷ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕಂಬನಿ ಮಿಡಿದಿದ್ದಾರೆ.

ಸ್ವಗ್ರಾಮ ಕೋಣಸಿರಸಗಿಯಲ್ಲಿ ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಮೃತರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಡಾ. ಅಜಯ್ ಸಿಂಗ್ ಅವರು ಅಗಲಿದ ಹೋರಾಗಾರರ ಪಾರ್ಥೀವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ದೇಶ ಸೇವೆಯನ್ನು ಕೊಂಡಾಡಿದ್ದಾರೆ.

ಸ್ವಾತಂತ್ರ್ಯ ಯೋಧ ಶಾಮರಾವ ಕುಲಕರ್ಣಿ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ಸ್ವಾತಂತ್ರ್ಯಕ್ಕಾಗಿ ತಾಲೂಕಿನಲ್ಲಿ ವಜ್ಜಲ್, ಮಳ್ಳಿ, ಸಾಲ್ವಡಗಿ ಕ್ಯಾಂಪ್‍ಗಳಲ್ಲಿ ಇದ್ದುಕೊಂಡು ರಜಾಕರರ ವಿರೋಧ ದಂಗೆ ಎದ್ದು ತೊಡೆತಟ್ಟಿ ಹೋರಾಟಕ್ಕೆ ಇಳಿದಿದ್ದರು. ಇವರ ದೇಶ ಸೇವೆಯನ್ನು ಗುರುತಿಸಿ ಅನೇಕರು ಪ್ರಶಸ್ತಿ ನೀಡಿ ಗೌರವಿಸಿದ್ದರು. ಇವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಡಾ. ಅಜಯ್ ಸಿಂಗ್ ಕಂಬನಿ ಮಿಡಿದಿದ್ದಾರೆ.