ವಿಮೋಚನಾ ಹೋರಾಟಕ್ಕೆ ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅಪಾರ:ಬಸವರಾಜ ದೇಶಮುಖ

ಕಲಬುರಗಿ;ಸೆ.17: ನಿಜಾಮರ ದಬ್ಬಾಳಿಕೆಯ ಆಡಳಿತದಿಂದ ಕಲ್ಯಾಣ ಕರ್ನಾಟಕ ವಿಮೋಚನಾ ಚಳವಳಿಗೆ ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅಪಾರವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಬಸವರಾಜ ದೇಶಮುಖ ಹೇಳಿದರು.

ಶನಿವಾರ ಕಲಬುರಗಿ ನಗರದ ಶರಣಬಸವೇಶ್ವರ ಕಾಲೇಜು ಮೈದಾನದಲ್ಲಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ದೇಶಮುಖ ಸಂಸ್ಥಾನವು ನಿಜಾಮರ ದಬ್ಬಾಳಿಕೆಯ ಆಡಳಿತ ಹಾಗೂ ನಿಜಾಮರ ಖಾಸಗಿ ಸೇನೆಯಾದ ರಜಾಕಾರರ ವಿರುದ್ಧ ದೃಢವಾಗಿ ನಿಂತು, ನಿಜಾಮ್ ಸರ್ಕಾರ ಮತ್ತು ರಜಾಕಾರರ ವಿರುದ್ಧದ ತಮ್ಮ ಪ್ರತಿರೋಧ ಚಳುವಳಿಗೆ ಸ್ವಾತಂತ್ರ್ಯ ಹೋರಾಟಗಾರರು ಒಮ್ಮುಖವಾಗಲು ಮತ್ತು ಯೋಜನೆಗಳನ್ನು ರೂಪಿಸಲು ಸಂಸ್ಥಾನವು ಸುರಕ್ಷಿತ ಸ್ಥಳವನ್ನು ಒದಗಿಸಿತ್ತು ಎಂದರು.

ವಿಮೋಚನಾ ಚಳವಳಿಗೆ ಬೆಂಬಲ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸಂಸ್ಥಾನ ಮತ್ತು ಸಂಸ್ಥಾನದ ಅಂದಿನ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು 1918 ರಲ್ಲಿ ಮೊದಲ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಿದ್ದು, ಆಗ ಇದು ನಿಜಾಮ್ ಮತ್ತು ರಜಾಕಾರರ ವಿರುದ್ಧ ಅವರ ಚಳುವಳಿಯನ್ನು ಆರಂಭಿಸಲು ಮತ್ತು ಯೋಜಿಸಲು ಸ್ವಾತಂತ್ರ್ಯ ಹೋರಾಟಗಾರರಿಗೆ ಸುರಕ್ಷಿತ ಸ್ಥಳವಾಗಿತ್ತು ಎಂದು ಶ್ರೀ ದೇಶಮುಖ ಹೇಳಿದರು..

ದೇಶಮುಖ ಅವರು ತಮ್ಮ ಮಾತುಗಳನ್ನು ಮುಂದುವರೆಸಿ, ಶರಣಬಸವೇಶ್ವರ ಸಂಸ್ಥಾನವೂ ರಜಾಕಾರರು ಮತ್ತು ನಿಜಾಮ ಸೇನೆಯ ದೌರ್ಜನ್ಯಕ್ಕೆ ಬಲಿಯಾಗಿ ಎರಡು ಬಾರಿ ದಾಳಿಗೆ ಒಳಗಾಗಿತ್ತು, ಸಂಸ್ಥಾನದ ಮೇಲಿನ ಎರಡನೇ ದಾಳಿಯು ಗಂಭೀರವಾಗಿದ್ದು, ಆಗ ಕೇವಲ 13 ವರ್ಷ ವಯಸ್ಸಿನ 8 ನೇ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಸೇರಿದಂತೆ ಇತರ ಕುಟುಂಬ ಸದಸ್ಯರೊಂದಿಗೆ ಸೋಲಾಪುರಕ್ಕೆ ಹೋಗಿ ನೆಲೆಸುವಂತೆ ಕೆಲವರು ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರಿಗೆ ಆ ಸಮಯದಲ್ಲಿ ಒತ್ತಾಯಿಸಿದ್ದರು ಎಂದು ತಿಳಿಸಿದರು.

ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ಸೋಲಾಪುರದಲ್ಲಿ ಆಶ್ರಯ ಪಡೆದಿದ್ದ ಸಂದರ್ಭದಲ್ಲಿ ಯುವಕ ಪೂಜ್ಯ ಶರಣಬಸವಪ್ಪ ಅಪ್ಪಾಜಿ ಅವರು ಎರಡನೇ ದಾಳಿಯ ನಂತರ ಕಲಬುರಗಿಯಲ್ಲಿ ಶರಣಬಸವೇಶ್ವರ ದೇಗುಲದಲ್ಲಿ ತ್ರಿಕಾಲ ಪೂಜೆ ನೆರವೇರಿಸಲು, ಹಲವಾರು ಜನರ ವಿರೋಧದ ನಡುವೆಯೂ ಅಪ್ಪಾಜಿಯವರು ಸಾಂಪ್ರದಾಯಿಕವಾಗಿ ಪವಿತ್ರ ಶ್ರಾವಣ ಮಾಸದಲ್ಲಿ ತ್ರಿಕಾಲ ಪೂಜೆ ನೆರವೇರಿಸಲು ಕಲಬುರಗಿಗೆ ಆಗಮಿಸಿ, ನಿಜಾಮರ ವಿರುದ್ಧದ ಚಳವಳಿಯಲ್ಲಿ ಪಾಲ್ಗೊಂಡಿದ್ದರು ಎಂದು ದೇಶಮುಖ ಹೇಳಿದರು.

ಸುಮಾರು 50 ವರ್ಷಗಳ ನಂತರ ಈ ಪ್ರದೇಶವು ವಿಮೋಚನಾ ದಿನವನ್ನು ಆಚರಿಸಲು ಪ್ರಾರಂಭಿಸಿತು ಎಂದ ಅವರು, ನಂತರ ಎಸ್ ಎಂ ಕೃಷ್ಣ ಸರ್ಕಾರವು ವಿಮೋಚನಾ ದಿನಾಚರಣೆಯನ್ನು ಅಧಿಕೃತವಾಗಿ ಸರ್ಕಾರದಿಂದಲೇ ಆಚರಿಸಲು ನಿರ್ಧರಿಸಿತು. ಹೈದರಾಬಾದ್ ಕರ್ನಾಟಕ ಪ್ರದೇಶವೆಂಬ ಹಳೆಯ ಹೆಸರನ್ನು ಬಿಟ್ಟು ಕಲ್ಯಾಣ ಕರ್ನಾಟಕ ಪ್ರದೇಶ ಎಂದು ಮರು ನಾಮಕರಣ ಮಾಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ದೇಶಮುಖ ನೆನಪಿಸಿಕೊಂಡು ಧನ್ಯವಾದ ಅರ್ಪಿಸಿದರು.

ನಂತರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ.ನಿಷ್ಠಿ, ಸಮಕುಲಪತಿ ಪೆÇ್ರ.ವಿ.ಡಿ.ಮೈತ್ರಿ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಕುಲಸಚಿವ(ಮೌಲ್ಯಮಾಪನ) ಡಾ.ಬಸವರಾಜ ಮಠಪತಿ, ಹಣಕಾಸು ಅಧಿಕಾರಿ ಪೆÇ್ರ.ಕಿರಣ ಮಾಕಾ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಂತರ ಗಣ್ಯರು ಎನ್‍ಸಿಸಿ ಕೆಡೆಟ್‍ಗಳ ಮತ್ತು ವಿಧ್ಯಾರ್ಥಿಗಳ ಗೌರವ ವಂದನೆಯನ್ನು ಸ್ವೀಕರಿಸಿದರು.