ವಿಮೆ ಪರಿಹಾರ ನೀಡಲು ವಿಫಲ ಬಸ್ ಜಪ್ತಿ

ಕೊಡಗು,ಸೆ.೧-ಅಪಘಾತ ವಿಮೆ ಪರಿಹಾರ ನೀಡುವಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ವಿಫಲವಾದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಅನ್ನು ವಿರಾಜಪೇಟೆಯಲ್ಲಿ ಜಿಲ್ಲಾ ನ್ಯಾಯಾಲಯ ಜಪ್ತಿ ಮಾಡಿದೆ.
ಜಿಲ್ಲೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಬಸ್ ಅನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕಳೆದ ೨೦೧೦ರಲ್ಲಿ ವಿರಾಜಪೇಟೆಯ ಮುನಾವರ್ ತಮ್ಮ ಕುಟುಂಬದವರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಮೈಸೂರಿಗೆ ತೆರಳುತ್ತಿದ್ದಾಗ ಹುಣಸೂರು ತಾಲ್ಲೂಕಿನ ಕಲ್ಲಬೆಟ್ಟ ಬಳಿ ಎದುರಿನಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದು ಮುನಾವರ್ ಸಾವನ್ನಪ್ಪಿದ್ದರು.
ಅಪಘಾತದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಮುನಾವರ್ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿ ಪರಿಹಾರವನ್ನೂ ನೀಡಿತ್ತು.
ಆದರೆ ಸಂಪೂರ್ಣ ಜಖಂಗೊಡಿದ್ದ ಕಾರಿಗೂ ವಿಮಾ ಪರಿಹಾರ ಹಣ ನೀಡುವಂತೆ ಮುನಾವರ್ ಪತ್ನಿ ಫಾತಿಮಾ ಅಫ್ಸರ್ ವಿರಾಜಪೇಟೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರಿಗೆ ವಿಮಾ ಪರಿಹಾರ ಹಣ ರೂ ೧,೪೮,೧೩೦ ಪಾವತಿಸುವಂತೆ ಆದೇಶ ಮಾಡಿತ್ತು.
ಇದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಹೈಕೋರ್ಟ್ ಕೆಎಸ್‌ಆರ್‌ಟಿಸಿ ಅರ್ಜಿಯನ್ನು ತಳ್ಳಿಹಾಕಿ ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ನ್ಯಾಯಾಲಯ ೨೦೨೧ರ ಮಾರ್ಚ್‌ನಲ್ಲಿ ಅಪಘಾತ ಪರಿವಹಾರ ವಿಮಾ ಹಣ ಪಾವತಿಸುವಂತೆ ಸಾರಿಗೆ ನಿಗಮಕ್ಕೆ ಬಹಳಷ್ಟು ಬಾರಿ ಸೂಚಿಸಿತ್ತು. ಆದರೂ ನಿಗಮ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿತ್ತು.
ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಹೆಚ್ಚುವರಿ ನ್ಯಾಯಾಲಯ ಇದೀಗ ಸಾರಿಗೆ ಬಸ್ ಅನ್ನೇ ಜಪ್ತಿ ಮಾಡುವಂತೆ ಆದೇಶ ಮಾಡಿತು.
ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ವಿರಾಜಪೇಟೆ ಬಸ್ ನಿಲ್ದಾಣಕ್ಕೆ ತೆರಳಿ ಪ್ರಕರಣಕ್ಕೆ ಸಂಬಂಧಪಟ್ಟ ಕೊಳ್ಳೇಗಾಲ ಡಿಪೋಕ್ಕೆ ಸೇರಿದ ಬಸ್ ಅನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಪರವಾಗಿ ವಿರಾಜಪೇಟೆ ವಕೀಲ ಟಿಪಿ ಕೃಷ್ಣ. ರಾಕೇಶ್ ಹಾಗೂ ಸಿ. ದರ್ಶನ್ ವಾದ ಮಂಡಿಸಿದ್ದರು.