ವಿಮಾ ಕಂಪನಿಯಿಂದ ರೈತರಿಗೆ ವಂಚನೆ: ಆರೋಪ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಜು12: ಧಾರವಾಡ ಜಿಲ್ಲೆಯ 2022 ರ ಮುಂಗಾರು ಹಂಗಾಮಿನ ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿದ್ದರೂ ಕೂಡಾ ಸೂಕ್ತ ಬೆಳೆ ವಿಮಾ ಪರಿಹಾರ ದೊರಕಿಲ್ಲ. ಇದರಿಂದಾಗಿ ಫಸಲ್ ಭೀಮಾ ಬೆಳೆ ವಿಮಾ ಶೇ 70ರಿಂದ80% ವಿಮಾ ಮೊತ್ತ ರೈತರಿಗೆ ಬಂದಿಲ್ಲ. ಈ ಹಿನ್ನಲೆಯಲ್ಲಿ ವಿಮಾ ಕಂಪನಿಯಿಂದ ರೈತರಿಗೆ ವಂಚನೆಯಾಗಿದೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷರಾದ ಸುರೇಶ ಕಿರೇಸೂರ ಆರೋಪಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ಪರಿಹಾರ ಮಾತ್ರ ಕೇವಲ 15% ರಿಂದ 25% ರಷ್ಟು ಬಿಡುಗಡೆಯಾಗಿದೆ ಎಂದರು.

ಹೆಚ್ಚು ಮಳೆಯಿಂದಾಗಿ ರಾಜ್ಯ ಸರ್ಕಾರ ಸಂಪೂರ್ಣ ಬೆಳೆ ಹಾನಿಯಾಗಿದ್ದು, ನೆರೆ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿತ್ತು, ಅದರ ಪ್ರಕಾರ ಬೆಳೆ ಹಾನಿ ನೀಡಿದೆ, ಅದೇ ಅಧಿಕಾರಿಗಳು ಬೆಳೆ ವಿಮಾ ಕಂಪನಿಗೆ ಕೇವಲ 15% ರಿಂದ 25% ರಷ್ಟು ಹಾನಿಯಾಗಿದೆ ಎಂದು ವರದಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ವಂಚನೆ ಮಾಡಲು ಕೆಲವು ಅಧಿಕಾರಿಗಳು ವ್ಯವಸ್ಥಿತವಾಗಿ ವಿಮಾ ಕಂಪನಿಗೆ ಲಾಭ ಮಾಡಿದ್ದಾರೆ ಎಂದು ದೂರಿದರು.

ಕೇಂದ್ರ ಸಚಿವರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಧಾರವಾಡ ಜಿಲ್ಲಾ ಶಾಸಕರು ಒಂದಗೂಡಿ ರೈತರಿಗೆ ಆದ ವಂಚನೆಯನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು. ಒಂದು ತಿಂಗಳದೊಳಗೆ ರೈತರ ಸಿಗಬೇಕಾದ ಸುಮಾರು 70% ರಿಂದ 80% ರಷ್ಟು ಬೆಳೆ ವಿಮಾ ಪರಿಹಾರವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಪ್ರಕಾಶ ಹನುಮರಡ್ಡಿ, ರಘುನಾಥಗೌಡ್ರ ಕೆಂಪಲಿಂಗನಗೌಡ್ರ, ಸುಭಾಸ್ ಬೂದಿಹಾಳ, ಮಂಜುನಾಥ ಗೊಜನೂರ, ದತ್ತಾತ್ರೇಯ ಪಾಟೀಲ್ ಉಪಸ್ಥಿತರಿದ್ದರು.