ವಿಮಾನ ಬಳಸಿ ರಾಜಧಾನಿಗೆ ನಾಳೆ ಸ್ಯಾನಿಟೈಸರ್

ಬೆಂಗಳೂರು, ಮೇ.೩೦- ಕೋವಿಡ್ ಸೋಂಕಿನ ಪ್ರಮಾಣ ತೀವ್ರವಾಗಿರುವ ಹಿನ್ನೆಲೆ ನಾಳೆಯಿಂದ ಮೂರು ದಿನಗಳ ಕಾಲ ರಾಜಧಾನಿ ಬೆಂಗಳೂರಿನಲ್ಲಿ ವಿಮಾನದ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.
ಏರಿಯಲ್ ವರ್ಕಸ್ ಏರೊ ಎಲ್‌ಪಿಪಿ ಸಂಸ್ಥೆಯು ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಿದೆ. ಜಕ್ಕೂರು ಏರೋಡ್ರೊಮ್‌ನಲ್ಲಿ ಕಂದಾಯ ಸಚಿವ ಆರ್.ಅಶೋಕ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ಇದೇ ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಕಲಾಸಿಪಾಳ್ಯ ಮೊದಲಾದ ಜನದಟ್ಟಣೆಯ ಪ್ರದೇಶಗಳಲ್ಲಿ ಮೂರು ದಿನ ಸಿಂಪಡಣೆ ಮಾಡಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಇದು ಸಫಲವಾದರೆ ಮುಂದಿನ ದಿನಗಳಲ್ಲಿ ಬೇರೆ ಪ್ರದೇಶಗಳಿಗೆ ವಿಸ್ತರಿಸಲಾಗುವುದು. ಇದು ಸಾವಯವ ದ್ರಾವಣವಾಗಿದ್ದು, ಜನರ ಮೇಲೆ ಸಿಂಪಡಣೆಯಾದರೂ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು, ಬೆಳಗಿನ ಸಮಯದಲ್ಲಿ ರೈತರು, ವ್ಯಾಪಾರಿಗಳು, ಗ್ರಾಹಕರು ಭಾರೀ ಸಂಖ್ಯೆಯಲ್ಲಿ ಮಾರುಕಟ್ಟೆ ಗಳನ್ನು ಪ್ರವೇಶಿಸುತ್ತಾರೆ.ಹಾಗಾಗಿ, ಇಂತಹ ಪ್ರದೇಶಗಳನ್ನು ಗುರುತಿಸಿ ಸ್ವಚ್ಛಗೊಳಿಸಲಾಗುವುದು ಜತೆಗೆ, ಸೋಂಕು ನಿವಾರಕ ಸಿಂಪಡಣೆ ಮಾಡಲಾಗುವುದು ಎಂದರು.