
ರಾಯಚೂರು,ಸೆ.೬- ರಾಯಚೂರು, ವಿಮಾನನಿಲ್ದಾಣ ಟೆಂಡರ್ ಪ್ರಕ್ರಿಯೆ ಅಕ್ರಮದಲ್ಲಿ ಭಾಗಿಯಾಗಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಮುಖ್ಯ ಅಭಿಯಂತರ, ಅಧೀಕ್ಷಕ ಅಬಿಯಂತರ ಮತ್ತು ಕಾರ್ಯನಿರ್ವಾಹಕ ಅಭಿಯಂತರರ ವಿರುದ್ಧ ಕೆಪಿಟಿಸಿ ಕಾಯ್ದೆಯನ್ವಯ ಕ್ರಮ ಜರುಗಿಸಲು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಿಗೆ ದೂರು ನೀಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಂದಾಗಿದೆ.
ರಾಯಚೂರು, ವಿಮಾನನಿಲ್ದಾಣ ನಿರ್ಮಾನ ಕಾಮಗಾರಿಗಾಗಿ ಕೆಕೆಆರ್‌ಡಿಬಿ ಮಂಡಳಿ ಎಸ್‌ಸಿಬಿ ಮತ್ತು ಪಿಎಸ್‌ಪಿ ಯೋಜನೆಯಡಿ ೨೮.೯೫ ಕೋಟಿ ಅನುದಾನ ಮನೀಡಲಾಗಿದೆ. ಆದರೆ, ೨೦೧೩-೨೦೧೭ರ ಕಾಮಗಾರಿ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮವೆಸಗಿರುವ ಕುರಿತು ಪೂರಕ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ಜಿಲ್ಲಾ ಸಂಚಾಲಕ ರಾಜುಪಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆಕೆಆರ್‌ಡಿಬಿ ಮಂಡಳಿಯಿಂದ ೨೦೨೦-೨೦೨೧ನೇ ಸಾಲಿನಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ರಾಯಚೂರು, ವಿಮಾನನಿಲ್ದಾಣ ಕಾಮಗಾರಿಗೆ ೨೭,೭೪,೨೧,೦೦೦ ಕೋಟಿ ಅನುದಾನವನ್ನು ಕೆಕೆಆರ್‌ಡಿಬಿ ಕಾರ್ಯದರ್ಶಿ ನಿಯಮಾನುಸಾರ ನೀಡಿದ್ದಾರೆ.
೨೦೨೩ನೇ ಸಾಲಿನಲ್ಲಿ ಇದೇ ರಾಯಚೂರು, ವಿಮಾನನಿಲ್ದಾಣ ಕಾಮಗಾರಿಗೆ ೬,೨೧,೬೦,೦೦೦ ಹಣವನ್ನು ಬಿಡುಗಡೆ ಮಾಡಲಾಗಿದೆ. ೨೦೨೦-೨೦೨೧ ಮತ್ತು ೨೦೨೨-೨೦೨೩ನೇ ಸಾಲಿನಲ್ಲಿ ಒಟ್ಟು ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ೨೮,೯೫,೮೧,೦೦೦ ಕೋಟಿ ಅನುದಾನವನ್ನು ನೀಡಿರುವುದು ಖಂಡನೀಯ ಎಂದಿರುವ ರಾಜುಪಟ್ಟಿ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಸ್‌ಪಿ ಕೋಶ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಇವರಿಗೆ ಸಲ್ಲಿಸಿರುವ ದೂರನ್ನು ಪರಿಗಣಿಸಿ ೨೦೨೩ರ ಆ. ೧೦ ರಂದು ಕಲಬುರಗಿ ಸಮಾಜಕಲ್ಯಾಣ ಇಲಾಖೆ ನಿರ್ದೇಶಕರಿಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಯಚೂರು, ವಿಮಾನನಿಲ್ದಾಣ ಕಾಮಗಾರಿಗಾಗಿ ಒಟ್ಟು ೨೩ ಎಕರೆ ೨೪ ಗುಂಟೆ ಜಮೀನು ಭೂಸ್ವಾಧೀನಕ್ಕೆ ಅವಕಾಶ ನೀಡಲಾಗಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಜಿಲ್ಲಾಡಳಿತ ಭುಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಏಕೆ ಎಂದು ರಾಜು ಪ್ರಶ್ನಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಲೋಕೋಪಯೋಗಿ ಇಲಾಖೆ ತರಾತುರಿಯಲ್ಲಿ ೧೪೩.೦೦ ಕೋಟಿ ಟೆಂಡರ್ ಕರೆದಿದ್ದು, ಕೇವಲ ೮ ದಿನಗಳ ಕಾಲಾವಕಾಶ ನೀಡಿರುವುದು ಈ ಕಾಮಗಾರಿಯ ಅಕ್ರಮಕ್ಕೆ ಸಾಕ್ಷಿಯಾಗಿದೆ.
ಕಾಮಗಾರಿಯನ್ನು ಯೋಜನಾ ಉಸ್ತುವಾರಿ ಮತ್ತು ಸಮಾಲೋಚನೆ ನಿಯಮದನ್ವಯ ಅನುಮೋದಿಸಲಾಗಿದ್ದರೂ ಸಂಸ್ಥೆಯನ್ನು ಇದುವರೆಗೂ ನೇಮಕ ಮಾಡಿಲ್ಲ.ಈಗಾಗಲೇ ಕೆಎಂವಿ ಪ್ರಾಜೆಕ್ಟ್ ಲಿಮಿಟೆಡ್ ಮಾಲೀಕ ವೆಂಕಟರಮಣ ಇವರಿಗೆ ವಿಮಾನನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ಶೇ. ೪.೯೯ ಹೆಚ್ಚುವರಿ ಲಾಭಾಂಶಕ್ಕೆ ಗುತ್ತಿಗೆ ನೀಡಿ ಅಕ್ರಮವೆಸಗಲಾಗಿದೆ.
ಆರ್ಥಿಕ ಇಲಾಖೆ ಸುತ್ತೋಲೆಯನ್ವಯ ಸಾರ್ವಜನಿಕ ಸಂಗ್ರಹಗಳಲ್ಲಿ ಶೇ. ೫ಕ್ಕಿಂತ ಹೆಚ್ಚಿನ ಲಾಭವುಳ್ಳ ಯಾವುದೇ ಕಾಮಗಾರಿ ಟೆಂಡರ್‌ನ್ನು ಅಂಗೀಕರಿಸಲು ಅವಕಾಶ ಇಲ್ಲ.ಒಂದು ಬೇಳೆ ಅಂತಹ ಸಂದರ್ಭಗಳು ನಿರ್ಮಾಣವಾದಲ್ಲಿ ಅನುಮೋದನೆ ಪಡೆದು ಅಂಗೀಕರಿಸಬೇಕಿದೆ. ಆದರೆ, ಈ ಟೆಂಡರ್ ಪ್ರಕ್ರಿಯೆಯಲ್ಲಿ ಸಮರ್ಥ ಕಾರಣಗಳನ್ನು ಉಲ್ಲೇಖಿಸಿಲ್ಲ ಎಂದು ರಾಜು ಆರೋಪಿಸಿದ್ದಾರೆ.
ರಾಯಚೂರು, ವಿಮಾನನಿಲ್ದಾಣ ಕಾಮಗಾರಿ ಅಕ್ರಮದಲ್ಲಿ ಭಾಗಿಯಾಗಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಅಭಿಯಂತರರ ವಿರುದ್ಧ ಕ್ರಮಕಯಗೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಿಗೆ ದೂರು ನೀಡಲಾಗುವುದು ಎಂದು ರಾಜುಪಟ್ಟಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾನೂನು ಸಲಹೆಗಾರ ಚಂದ್ರಶೇಖರ ವಕೀಲ, ನಾಗರಾಜ್ ಹಿರಿಮನೆ, ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಜಗದೀಶ ಮತ್ತಿತರರಿದ್ದರು.