‘ವಿಮಾನ ನಿಲ್ದಾಣದ ಹೆಸರಲ್ಲಿ ಕಾಂಗ್ರೆಸ್ ಜಾತಿ ರಾಜಕಾರಣ’


ಮಂಗಳೂರು, ನ.೨೦- ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕೆಂಬ ಪ್ರತಿಭಟನೆಯ ಮೂಲಕ ಕಾಂಗ್ರೆಸ್ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೨ರಲ್ಲಿ ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಣೆ ಆಗುವಾಗ ಯುಪಿಎ ಸರಕಾರ ಇದ್ದಾಗ ಕೋಟಿ ಚೆನ್ನಯ ಹೆಸರಿಡಬೇಕೆಂದು ಇವರು ಒತ್ತಾಯಿಸಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮುಖಂಡರಲ್ಲೇ ಹೆಸರಿನ ಬಗ್ಗೆ ಗೊಂದಲವಿದೆ, ಒಬ್ಬರು ರಾಣಿ ಅಬ್ಬಕ್ಕ ಹೆಸರು ಇಡುವಂತೆ, ಇನ್ನೊಬ್ಬರು ಶ್ರೀನಿವಾಸ ಮಲ್ಯ ಹೆಸರಿಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದು ಜಾತಿ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರವಷ್ಟೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದೆ ಏರ್‌ಪೋರ್ಟ್ ಅಥಾರಿಟಿ ಆಫ್ ಎಂಬ ಜಾಗದಲ್ಲಿ ಅದಾನಿ ಏರ್ ಪೋರ್ಟ್ ಎಂದು ಬದಲಾವಣೆ ಆಗಿದೆಯೇ ಹೊರತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂಬ ಹೆಸರು ಹಾಗೆಯೇ ಇದೆ ಎಂದವರು ಹೇಳಿದರು. ಯುಪಿಎ ಅವಧಿಯಲ್ಲಿಯೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದ್ದರು. ಆದರೆ ರಾಜ್ಯ ಸರಕರಾದಿಂದ ಪ್ರಸ್ತಾಪ ಸಲ್ಲಿಕೆಯಾಗಿರಲಿಲ್ಲ. ಈಗ ಸಂಸದರು ಈ ನಿಟ್ಟಿನಲ್ಲಿ ಪ್ರಯತ್ನಿಸು ತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಹೋರಾಟದಿಂದಾಗಿ ಕೋಟಿ ಚೆನ್ನಯ ಹೆಸರಿಡುವುದು ಅಲ್ಲ. ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದು, ಜಿಲ್ಲೆಯ ಬಿಲ್ಲವ ಸಮುದಾಯ ಈ ನಿಟ್ಟಿನಲ್ಲಿ ಜಾಗೃತರಾಗಿದ್ದಾರೆ. ಕಾಂಗ್ರೆಸ್‌ನವರು ತಮ್ಮ ಪಕ್ಷದಲ್ಲಿ ಬಿಲ್ಲವ ನಾಯಕರಿಗೆ ಯಾವ ರೀತಿಯ ಮಾನ್ಯತೆ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಸಿಆರ್‌ಝೆಡ್‌ನಡಿ ಪರವಾನಿಗೆ ವಿತರಣೆ ಕುರಿತಂತೆ ಮುಂದಿನ ಎರಡುಮೂರು ದಿನಗಳಲ್ಲಿ ನಿರ್ಧಾರವಾಗಲಿದೆ. ಬಳಿಕ ಮರಳಿನ ಸಮಸ್ಯೆ ಬಗೆಹರಿಯಲಿದ್ದು, ಕಡಿಮೆ ದರದಲ್ಲಿ ಮರಳು ಲಭ್ಯವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ರಾಧಾಕೃಷ್ಣ, ಈಶ್ವರ ಕಟೀಲು ಉಪಸ್ಥಿತರಿದ್ದರು.