ವಿಮಾನ ನಿಲ್ದಾಣದಿಂದ ಹೂಡಿಕೆಗೆ ಹೆಚ್ಚು ಅವಕಾಶ

ಶಿವಮೊಗ್ಗ.ಫೆ.೨೩; ವಿಮಾನ ನಿಲ್ದಾಣ ಕಾರ್ಯ ಆರಂಭಿಸಿದ ನಂತರ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಾಗುವ ನೀರಿಕ್ಷೆಯಿದೆ. ವಿಮಾನ ನಿಲ್ದಾಣದಿಂದ ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.ಫೆಬ್ರವರಿ 27 ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಶುಭಾಶಯ ಕೋರುವ ಬಗ್ಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಉದ್ಯಮದಾರರಿಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಬಹುತೇಕ ಹೂಡಿಕೆದಾರರು ವಿಮಾನಯಾನ ಸೌಲಭ್ಯ ಇದೆಯೇ ಎಂದು ಕೇಳುತ್ತಿದ್ದರು. ಬಹುತೇಕ ಸಂಸ್ಥೆಗಳು ವಿಮಾನಯಾನ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡುತ್ತಿದ್ದರು. ವಿಮಾನಯಾನ ಬಗ್ಗೆ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತರಲಾಯಿತು ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ವಿಮಾನ ನಿಲ್ದಾಣ ಆರಂಭಿಸುವ ಬಗ್ಗೆ ಮಹತ್ವದ ಚರ್ಚೆಗಳು ಆಯಿತು. ಬಿ.ಎಸ್.ಯಡಿಯೂರಪ್ಪ ಅವರ ಸಂಪೂರ್ಣ ಪ್ರಯತ್ನದಿಂದ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕೆಲಸ ಆರಂಭಗೊಂಡಿತು. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಪರಿಶ್ರಮದಿಂದ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ ಎಂದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ವಿಮಾಣ ನಿಲ್ದಾಣ ಉದ್ಯಮ ಕ್ಷೇತ್ರಕ್ಕೆ ಅತ್ಯಂತ ಬೇಡಿಕೆಯ ವಿಷಯ ಆಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಪೂರ್ಣ ಪ್ರಯತ್ನದಿಂದ ಬಿ.ಎಸ್.ಯಡಿಯೂರಪ್ಪ ಅವರ ಕನಸು ನನಸಾಗುತ್ತಿದೆ. ವಿಮಾನ ನಿಲ್ದಾಣದಿಂದ ಕೈಗಾರಿಕಾ ಹಾಗೂ ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಹೇಳಿದರು.