ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಲು ಒತ್ತಾಯ: ಪಂಜಿನ ಮೆರವಣಿಗೆ

ಮಂಗಳೂರು, ನ.೧೯- ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಹಾಗೂ ಮುಲ್ಕಿ, ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ನಿನ್ನೆ ಪಂಜಿನಮೆರವಣಿಗೆ ನಡೆಸಲಾಯಿತು.

ದ.ಕ. ಜಿಲ್ಲೆಯ ಮಾಜಿ ಸಚಿವ ರಮಾನಾಥ ರೈ ಪಂಜಿನ ಮೆರವನಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ರೈ ಅವರು, ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡುವವರೆಗೆ ನಮ್ಮ ಪ್ರತಿಭಟನೆ ನಿರಂತರವಾಗಿ ಮುಂದುವರೆಯಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿಯ ಕೃಪಾಕಟಾಕ್ಷದಿಂದ ಅಧಿಕಾರಕ್ಕೇರಿದ್ದಾರೆ. ಅವರನ್ನು‌‌ ಓಲೈಸಲು ಇದೀಗ ವಿಮಾನ ನಿಲ್ದಾಣವನ್ನು ಖಾಸಗಿಕರಣಗೊಳಿಸಲಾಗಿದೆ ಎಂದರು. ಇನ್ನು ಮಂಗಳೂರಿನ ಕದ್ರಿ ಪಾರ್ಕ್ ಬಳಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕದ್ರಿಯಿಂದ ಕಾಲ್ನಡಿಗೆ ಮೂಲಕ ಬಜಪೆ ಸಮೀಪದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತನಕ ಪಂಜಿನ ಮೆರವಣಿಗೆ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಂಜಿನ ಮೆರವಣಿಗೆಯಲ್ಲಿ ಭಾಗಿಗಳಾಗಿದ್ದರು. ಇದೇ ವೇಳೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎ.ಸಿ. ವಿನಯರಾಜ್ ಮತ್ತಿತರರು ಜೊತೆಗಿದ್ದರು.