ವಿಮಾನ ತಪ್ಪಿಸಿಕೊಂಡ ನವದಂಪತಿ 3 ಲಕ್ಷ ಪರಿಹಾರಕ್ಕೆ ಆಗ್ರಹ

ಬೆಂಗಳೂರು, ನ.೨೬-ಮಹಿಳೆಯೊಬ್ಬರು ಭಧ್ರತಾ ಸಿಂಬ್ಬದಿಯ ಜೊತೆ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ನವದಂಪತಿ ತಾವು ಹೋಗಬೇಕಾದ ವಿಮಾನದಲ್ಲಿ ಸಂಚರಿಸಲು ಸಾಧ್ಯವಾಗದೇ ೩ ಲಕ್ಷ ರೂಗಳ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ನ.೨೪ರಂದು ರಾತ್ರಿ ೧೧:೫೦ ರ ಸಮಯದಲ್ಲಿ ಗೇಟ್ ನಂಬರ್ ೪ರಲ್ಲಿ ಈ ಘಟನೆ ನಡೆದಿದೆ.
ಮುಂಬೈನ ಅಂಧೇರಿ ಪಶ್ಚಿಮದಲ್ಲಿ ನೆಲೆಸಿರುವ ನೀಕೇತ ಆಗಮ್ ಎಂಬ ಮಹಿಳೆಯು ಸರತಿಯಲ್ಲಿದ್ದ ಪ್ರಯಾಣಿಕರ ಪಟ್ಟಿಯನ್ನ ಬೈಪಾಸ್ ಮಾಡಿ ಮುಂದಕ್ಕೆ ಹೋಗಲು ಪ್ರಯತ್ನಿಸಿದಾಗ ಭಧ್ರತಾ ಸಿಬ್ಬಂದಿ ಮಹಿಳೆಯನ್ನ ತಡೆದಿದ್ದಾರೆ.
ಆದರೆ, ತಡೆದ ಸಿಬ್ಬಂದಿ ವಿರುದ್ಧವೇ ಮಹಿಳೆ ಕೆಟ್ಟದಾಗಿ ವರ್ತಿಸಿದ್ದು ಜಗಳದಲ್ಲಿ ಸರದಿ ಸಾಲಿನಲ್ಲಿದ್ದ ಮತ್ತಿಕೆರೆ ನಿವಾಸಿಗಳಾದ ಪ್ರಿಯಾಂಕ ರಾಚಮಲ್ಲ ಮತ್ತು ವಿಜಯಕಾಂತ್ ಭೀಮಿರೆಡ್ಡಿ ತಮ್ಮ ವಿಮಾನವನ್ನು ಏರಲು ಸಾಧ್ಯವಾಗಲಿಲ್ಲ.
ನವ ದಂಪತಿಗಳಾದ ಪ್ರಿಯಾಂಕ ರಾಚಮಲ್ಲ ಮತ್ತು ವಿಜಯಕಾಂತ್ ಭೀಮಿರೆಡ್ಡಿ ಗೋ ಫಸ್ಟ್ ಜಿ-೮ ೪೦೩೨ ವಿಮಾನದಲ್ಲಿ ಮಾಲೆಗೆ ತೆರಳುತ್ತಿದ್ದರು.ಆದರೆ, ಮಹಿಳೆಯ ರಂಪಾಟದಿಂದ ಸೆಕ್ಯೂರಿಟಿ ಕ್ಲಿಯರೆನ್ಸ್ ಸಮಯಕ್ಕೆ ಸರಿಯಾಗಿ ಪಡೆಯಲು ಸಾಧ್ಯವಾಗದೆ ತಮ್ಮ ವಿಮಾನವನ್ನು ಮಿಸ್ ಮಾಡಿಕೊಂಡಿದ್ದಾರೆ.
ಇದಕ್ಕಾಗಿ ನವದಂಪತಿ ವಿಮಾನ ಸಂಸ್ಥೆಗೆ ೩ ಲಕ್ಷ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಇನ್ನು ಭಧ್ರತಾ ಸಿಬ್ಬಂದಿ ಮಹಿಳೆ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.