ವಿಮಾನದಲ್ಲಿ ಪಾನಮತ್ತಳಿಂದ ಅಸಭ್ಯ ವರ್ತನೆ

ಕೋಲ್ಕತ್ತಾ(ಪಶ್ಚಿಮ ಬಂಗಾಳ), ಮೇ.೧೨- ವಿಮಾನದಲ್ಲಿ ಪ್ರಯಾಣಿಕರು ಅಸಭ್ಯ ಅನುಚಿತವಾಗಿ ವರ್ತಿಸುವ ಘಟನೆಗಳು ಮುಂದುವರೆದಿದ್ದು,ಇಂಡಿಗೋ ವಿಮಾನದಲ್ಲಿ ಪಾನಮತ್ತ ಮಹಿಳೆಯೊಬ್ಬರು ಸಹ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿ ರಂಪಾಟ ಮಾಡಿದ್ದಾರೆ.
ವಿಷಯ ತಿಳಿದ ತಕ್ಷಣವೇ ಅನುಚಿತವಾಗಿ ವರ್ತಿಸಿದ ಮಹಿಳೆಯನ್ನು ಸಿಐಎಸ್‌ಎಫ್ ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ಕೋಲ್ಕತ್ತಾ ಪೊಲೀಸರಿಗೆ ಹಸ್ತಾಂತರಿಸಿದೆ.
ನವದೆಹಲಿ-ಕೋಲ್ಕತ್ತಾ ನಡುವೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ಮಹಿಳೆಯು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಆಕೆಯನ್ನು ಸಿಐಎಸ್‌ಎಫ್ ಸಿಬ್ಬಂದಿ ಮಹಿಳೆಯನ್ನು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ನಿನ್ನೆ ಕೋಲ್ಕತ್ತಾ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅನುಚಿತ ವರ್ತನೆ ತೋರಿದ ಮಹಿಳೆಯನ್ನು ಪರಂಜಿತ್ ಕೌರ್ ಎಂದು ಗುರುತಿಸಲಾಗಿದ್ದು, ಆಕೆ ನವದೆಹಲಿ-ಕೋಲ್ಕತ್ತಾ ವಿಮಾನದಲ್ಲಿ ಪರಂಜಿತ್ ಕೋಲ್ಕತ್ತಾಗೆ ಹೋಗುತ್ತಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಮದ್ಯದ ಅಮಲಿನಲ್ಲಿದ್ದ ಮಹಿಳೆಯೊಬ್ಬರು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳೆ ಹಾರಾಟಕ್ಕೆ ಅಡ್ಡಿಪಡಿಸುತ್ತಿರುವುದನ್ನು ಅರಿತ ಕ್ಯಾಬಿನ್ ಸಿಬ್ಬಂದಿ ಘಟನೆಯ ಬಗ್ಗೆ ಏರ್‌ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಮಾನಯಾನ ಅಧಿಕಾರಿಗಳು ತಕ್ಷಣವೇ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾದ ಸಿಐಎಸ್‌ಎಫ್ ಸಿಬ್ಬಂದಿಯನ್ನು ಸಂಪರ್ಕಿಸಿದರು. ಮಧ್ಯಾಹ್ನ ೧.೧೦ಕ್ಕೆ ವಿಮಾನ ಲ್ಯಾಂಡ್ ಆದ ಬಳಿಕ ಏರ್ ಲೈನ್ ಸಿಬ್ಬಂದಿ ಆಕೆಯನ್ನು ಸಿಐಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.ನಿನ್ನೆ ಬೆಳಗಿನ ಜಾವದವರೆಗೆ ಸಿಐಎಸ್‌ಎಫ್ ಆಕೆಯನ್ನು ವಿಮಾನ ನಿಲ್ದಾಣದ ಆವರಣದಲ್ಲಿ ಬಂಧಿಸಿ, ಕೊನೆಗೆ ಬೆಳಗ್ಗೆ ೭ ಗಂಟೆ ಸುಮಾರಿಗೆ ಬಿಧಾನನಗರ ಸಿಟಿ ಪೊಲೀಸ್ ಅಧೀನದಲ್ಲಿರುವ ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.
ಭಾರತೀಯ ಕಾನೂನಿನ ಪ್ರಕಾರ, ಸೂರ್ಯಾಸ್ತದ ನಂತರ ಪೊಲೀಸರು ಮಹಿಳೆಯನ್ನು ಬಂಧಿಸುವಂತಿಲ್ಲ ಇದರಿಂದಾಗಿ ಸಿಐಎಸ್‌ಎಫ್ ಸಿಬ್ಬಂದಿ ಸೂರ್ಯೋದಯದವರೆಗೆ ಕಾಯಬೇಕಾಯಿತು.