ವಿಮಾನದಲ್ಲಿ ಧೂಮಪಾನ ಮಾಡಿ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ

ಬೆಂಗಳೂರು, ಮೇ 16- ಅಹಮದಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣಿಸಿ ವಿಮಾನದಲ್ಲಿ ಧೂಮಪಾನ ಮಾಡಿದ ಓರ್ವನನ್ನು ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ರಾಜಸ್ಥಾನ ರಾಜ್ಯ ಪಾಲಿ ಜಿಲ್ಲೆಯ ಪ್ರವೀಣ್ ಕುಮಾರ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 1.10 ಗಂಟೆಗೆ ಆರೋಪಿ ಪ್ರವೀಣ್ ಕುಮಾರ್ ಏರ್‌ಲೈನ್ಸ್ ವಿಮಾನದಲ್ಲಿ ಅಹಮದಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದು, ಈ ವೇಳೆ ಧೂಮಪಾನ ಮಾಡಿದ್ದಾನೆ.

ಈ ಸಂಬಂಧ ವಿಮಾನ ನಿಲ್ದಾಣ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದಿರುವ ಕೆಂಪೇಗೌಡ ವಿಮಾನ ನಿಲ್ದಾಣ ಠಾಣಾ ಪೊಲೀಸರು ಸುರಕ್ಷತೆ, ಭದ್ರತೆಯನ್ನು ಉಲ್ಲಂಘಿಸಿರುವ ಆರೋಪದಡಿ ಕ್ರಮ ಕೈಗೊಂಡಿದ್ದಾರೆ.