ವಿಭೂತಿಯ ತೇರು

ಕಲಬುರಗಿ,ಜು 9: ವೀರಶೈವ ಲಿಂಗಾಯತ ಮಠ,ಮಂದಿರಗಳು ಮತ್ತು ಅವಿಭಕ್ತ ಕುಟುಂಬದ ಬೃಹತ್ ಅಡುಗೆ ಮನೆಗಳಿಗೆ ಅನುಕೂಲವಾಗಲೆಂದು ತಯಾರಿಸಿದ ತೇರಿನ ವಿನ್ಯಾಸದ ವಿಭೂತಿಯ ಪೆಟ್ಟಿಗೆ ಇದು. ಇದು ಚಲಿಸಲು ಬರುವಂತೆ ಗಾಲಿಗಳನ್ನು ಅಳವಡಿಸಲಾಗುತ್ತಿತ್ತು.ಇದರಲ್ಲಿ ಹಲವಾರು ಬಗೆ ವಿನ್ಯಾಸಗಳಿದ್ದ ವಿಭೂತಿ ಪೆಟ್ಟಿಗೆಗಳಿರುತ್ತಿದ್ದವು.
ನೆಲದ ಮೇಲೆ ಕುಳಿತು ಸಹ ಪಂಕ್ತಿ ಊಟ ಮಾಡುವಾಗ ಕಡ್ಡಾಯವಾಗಿ ವಿಭೂತಿ ಧಾರಣೆ ಮಾಡಲು ಅನುಕೂಲವಾಗಲೆಂದು ಈ ತೇರಿನ ಒಳಗೆ ವಿಭೂತಿಯ ಗಟ್ಟಿಗಳನ್ನ ಇಟ್ಟು ಮುಂದಕ್ಕೆ ಕಳಿಸುತ್ತಿದ್ದರು.ಇದರಲ್ಲಿಯ ವಿಭೂತಿ ಧಾರಣೆ ಮಾಡಿಕೊಂಡು ಅವರ ಪಕ್ಕದಲ್ಲಿ ಕುಳಿತವರಿಗೆ ಈ ತೇರನ್ನು ತಳ್ಳುತ್ತಿದ್ದರು.ಇದೇತರ ಈ ತೇರು ಇಡೀ ಅಡುಗೆ ಮನೆಯನ್ನು ಸುತ್ತು ತ್ತಿತ್ತು. ಕೆಲವೊಂದು ಸಂದರ್ಭದಲ್ಲಿ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿದ್ದಾಗ ಊರವರು, ನೆಂಟರಿಷ್ಟರು ಸಹಪಂಕ್ತಿ ಭೋಜನ ಮಾಡುವಾಗಲೂ ಇದನ್ನು ಬಳಸುತ್ತಿದ್ದರು.
ಈಗ ಅವಿಭಕ್ತ ಕುಟುಂಬಗಳು ಕಡಿಮೆಯಾಗಿವೆ. ಜೊತೆಗೆ ಬೃಹದಾಕಾರದ ಅಡುಗೆ ಮನೆಯೂ ಇಲ್ಲ. ನೆಲದ ಮೇಲೆ ಕುಳಿತು ಸಹ ಪಂಕ್ತಿ ಭೋಜನವೂ ಕಡಿಮೆಯಾಗಿದೆ.ಹೀಗಾಗಿ ಇಂತಹ ವಿನ್ಯಾಸದ ವಿಭೂತಿ ತೇರು ಕಣ್ಮರೆಯಾಗುತ್ತಿವೆ.