ವಿಭಿನ್ನ ರುಚಿ ಪರಿಚಯಿಸಿದ ಆಹಾರ ಮೇಳ


ಚಿತ್ರದುರ್ಗ,ಅ.30; ಗರಿಗರಿಯಾದ ಚಕ್ಕುಲಿ,  ಘಮ ಘಮಿಸುವ ಹೋಳಿಗೆ, ಸಿರಿ ಧಾನ್ಯಗಳಿಂದ ಸಿದ್ದಪಡಿಸಿದ ವಿಧ ವಿಧವಾದ ಆಹಾರ ಪದಾರ್ಥಗಳು, ತರಕಾರಿ ಹಾಗೂ ಹಣ್ಣುಗಳಿಂದ ಮೂಡಿದ ನಾನಾ ರೀತಿಯ ಕಲಾಕೃತಿಗಳು, ಖಡಕ್ ರೊಟ್ಟಿ, ಎಣ್ಣೆ ಗಾಯಿ ಪಲ್ಯ, ವೈದ್ಯಮಯವಾದ ಸಿಹಿ ಖಾದ್ಯಗಳು ಆಹಾರ ಪ್ರಿಯರನ್ನು ರುಚಿ ಸವಿಯಲು ಕೈ ಬೀಸಿ ಆಹ್ವಾನಿಸುವಂತಿದ್ದವು.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಆಹಾರ ಮೇಳ ಆಯೋಜಿಸಲಾಗಿತ್ತು.
ಜಿಲ್ಲಾ ವ್ಯಾಪ್ತಿಯ ಏಳು ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬರುವ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ಮನೆಯಲಿಯೇ ತಯಾರಿಸಿದ ಆಹಾರ ಪದಾರ್ಥಗಳು ಆಹಾರ ಮಳಿಗೆಗಳಲ್ಲಿ ಕಂಡುಬಂದವು.
ಹಪ್ಪಳ, ಸಂಡಿಗೆ, ಚಕ್ಕುಲಿ, ಕೋಡುಬಳೆ, ರಾಗಿ ರೊಟ್ಟಿ, ಚಟ್ನಿ, ದ್ವಿದಳ ಧಾನ್ಯಗಳು, ಜೋಳದ ರಟ್ಟಿ, ಸಜೆ ರಟ್ಟಿ, ಮೊಟ್ಟೆ ತರಕಾರಿ, ಎಲ್ಲಾ ತರಹದ ಹಣ್ಣುಗಳು, ತಂಪು ಪಾನಿಯಗಳು, ಸಿಹಿ ತಿನಿಸು, ದೇಸಿಯ ಕೊಬ್ಬರಿ ಎಣ್ಣೆ, ಸಾಬೂನು, ವಿಧ ವಿಧವಾದ ಮೊಳಕೆ ಕಾಳುಗಳಿಂದ ತಯಾರಿಸಿದ ಪಲ್ಯ, ಕೋಸಂಬರಿ, ಅಗಸಿ ಚಟ್ನಿ ಪುಟಿ, ಕೊಬ್ಬರಿ ಚಿನ್ನಿ, ಪೌಷ್ಠಿಕ ಆಹಾರವಾದ ಕರ್ಜಿ ಕಾಯಿ, ರವೆ ಉಂಡೆ, ಶಂಕರ್ ಪೌಳಿ, ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸಿದ ಪ್ರೋಟಿನ್ ಪೌಡರ್ ಸೇರಿದಂತೆ ರುಚಿ ರುಚಿಯಾದ ಆಹಾರ ಪದಾರ್ಥಗಳು ಆಹಾರ ಪ್ರಿಯರನ್ನು ಕೈಬೀಸಿ ಕರೆದವು.
ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ  ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮ ಮುಂದುವರೆಯುತ್ತಿದ್ದು, ಮಹಿಳಾ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಎಲ್ಲ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜನೆ ಮಾಡಿದ್ದಾರೆ. ಆರೋಗ್ಯವನ್ನು ಹೇಗೆ ಸದೃಢವಾಗಿ ಕಾಯ್ದುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕು ಹಾಗೂ ತಾಯಿಯ ಗರ್ಭದಲ್ಲಿಯೇ ಯಾವ ರೀತಿಯಾಗಿ ಮಗುವನ್ನು ಆರೋಗ್ಯವಾಗಿ ಇಡಬೇಕು. ಆ ತಾಯಿ ಯಾವ ರೀತಿಯಾಗಿ ಆರೋಗ್ಯವನ್ನು ನೋಡಿಕೊಳ್ಳಬೇಕು ಎಂಬುದು ನಮ್ಮ ಆಹಾರ ಪದ್ಧತಿಯಿಂದ ಸಾಧ್ಯವಾಗುತ್ತದೆ ಎಂದರು.
ಆಹಾರ ಮೇಳದಲ್ಲಿ ಯಾವ ರೀತಿಯಾಗಿ ಆಹಾರ ಸೇವನೆ ಮಾಡಬೇಕು ಎಂದು ವಿವಿಧ ರೀತಿಯಲ್ಲಿ ಮಾರಾಟ ಮಳಿಗೆಗಳಲ್ಲಿ ಆರೋಗ್ಯವಾದ ಸಿರಿಧಾನ್ಯಗಳ ಮೂಲಕ ತುಂಬಾ ವಿಭಿನ್ನವಾಗಿ ಕಲಾಕೃತಿಯಾಗಿ ತಯಾರಿಸಿ ಮಳಿಗೆಯಲ್ಲಿ ಇಟ್ಟಿದ್ದಾರೆ. ತರಕಾರಿ ಮತ್ತು ವಿವಿಧ ಆಹಾರ ಧಾನ್ಯಗಳನ್ನು ಬಳಸಿಕೊಂಡು ಆರೋಗ್ಯಕರವಾದ ತಿನಿಸುಗಳನ್ನು ಸಿದ್ಧಪಡಿಸಿದ್ದಾರೆ. ಮಕ್ಕಳಿಗೆ ಆಹಾರದ ಬಗ್ಗೆ ಒಲವು ತೋರಿಸಬೇಕು ಎಂಬುದನ್ನು ವಿವಿಧ ಶೈಲಿಯಲ್ಲಿ ಆಹಾರಗಳನ್ನು ತಯಾರಿಸಿ ಮಕ್ಕಳನ್ನು ಸೆಳೆದಿದ್ದಾರೆ. ಅತ್ಯುತ್ತಮವಾಗಿ ಆಹಾರ ಮೇಳ ಮೂಡಿಬಂದಿದೆ ಎಂದು ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಆಹಾರ ಮೇಳದಲ್ಲಿ ವಿಧವಿಧವಾದ ಆಹಾರಗಳನ್ನು ತಯಾರಿಸಿದ್ದಾರೆ. ಮನೆಯಲ್ಲಿಯೇ ಸಿಗುವಂತಹ ಆಹಾರ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸಿಕೊಂಡು ರುಚಿರುಚಿಯಾಗಿ ತಿನಿಸುಗಳನ್ನು ಸಿದ್ಧಪಡಿಸಿದ್ದಾರೆ ಎಂದರು.
ತಾಯಂದಿರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಹೇಗೆ ತಯಾರಿಸಿ ನೀಡಬೇಕು ಎಂಬುದನ್ನು ಹಲವಾರು ಸ್ತ್ರೀಶಕ್ತಿ ಸಂಘಗಳು ಮೇಳದಲ್ಲಿ ಪ್ರದರ್ಶನ ನೀಡಿವೆ. ಇಲ್ಲಿ ಸಿಗುವ ಸಿದ್ದವಾದ ಆಹಾರ ಯಾವ ಕಾರ್ಪೋರೇಟ್ ವಾಣಿಜ್ಯ ಸಂಸ್ಥೆಯಲ್ಲಿಯು ಸಿಗುವುದಿಲ್ಲ ಎಂದರು.
ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಮಾತನಾಡಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಹಾರ ಮೇಳವನ್ನು ಆಯೋಜಿಸಲಾಗಿದೆ. ದೇಶಿಯವಾಗಿ ಜಿಲ್ಲೆಯಲ್ಲಿ, ನಾಡಿನಲ್ಲಿ ಯಾವ ಯಾವ ರೀತಿಯಲ್ಲಿ ಆಹಾರವನ್ನು ಉಪಯೋಗಿಸುತ್ತಿದ್ದೇವೆ ಎಂಬುದನ್ನು ಆಹಾರ ಮೇಳದ ಮೂಲಕ ದೇಶಿ ಶೈಲಿಯ ಆಹಾರವನ್ನು ಪರಿಚಯಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಾಲೆಯಿಂದ ಬಂದತಕ್ಷಣ ತಿನ್ನಲು ಸ್ನ್ಯಾಕ್ಸ್ ಕೇಳುತ್ತಾರೆ ಮನೆಯಲ್ಲಿ ಜಂಕ್‍ಪುಡ್‍ನ್ನು ನೀಡದೇ ದೇಶಿಶೈಲಿಯ ನಾನಾ ತರಹದ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಕೊಟ್ಟರೆ ಸಂತೋಷದಿಂದ ಸೇವಿಸುತ್ತಾರೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
 ಪ್ರಪಂಚದಲ್ಲಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ದೇಶ ಭಾರತವಾಗಿದ್ದು, ಯುವ ಭಾರತ ಸದೃಢವಾಗಿ ಇರಬೇಕಾದರೆ ದೇಶಿಯ ಆಹಾರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ್ ಮಾತನಾಡಿ, ಆಹಾರ ಮೇಳದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಸಹ ಸ್ವ-ಸಹಾಯ ಗುಂಪುಗಳು ತಯಾರಿಸಿದ ಆಹಾರ ಪದಾರ್ಥಗಳನ್ನು ಖರೀದಿಸುವ ಮೂಲಕ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಪ್ರೋತ್ಸಾಯಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆಹಾರ ಮೇಳದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ, ಮಕ್ಕಳ ರಕ್ಷಣಾಧಿಕಾರಿ ಲೋಕೇಶಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.