ವಿಭಾಗ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ:ಜಿ ಪಂ. ಸಿ.ಇ.ಓ. ಡಾ.ಗಿರಿಶ್ ಡಿ. ಬದೋಲೆ ಉದ್ಘಾಟನೆ

ಕಲಬುರಗಿ,ಜ.10: ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನದಲ್ಲಿ ಕಳೆದ ಜನವರಿ 7 ರಿಂದಲೇ ಆರಂಭವಾಗಿರುವ ಕಲಬುರಗಿ ವಿಭಾಗ ಮಟ್ಟದ ವಸ್ತು ಪ್ರದಶರ್Àನ ಮತ್ತು ಮಾರಾಟ ಮೇಳವನ್ನು ಸೋಮವಾರ ಜಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಉದ್ಘಾಟಿಸಿ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ತಯಾರಿಸಿರುವ ವಿವಿಧ ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ ಯು., ಕಲಬುರಗಿ ನಗರ ಸಿ.ಡಿ.ಪಿ.ಓ. ಭೀಮರಾಯ ಸೇರಿದಂತೆ ಇತರೆ ಅಧಿಕಾರಿಗಳು ಸಾಥ್ ನೀಡಿದದರು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸ್ತ್ರೀಶಕ್ತಿ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಜ.7 ರಿಂದ ಒಂದು ವಾರಗಳ ಕಾಲ ನಡೆಯಲಿದೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಸುಮಾರು 80 ಸ್ಟಾಲ್‍ಗಳನ್ನು ಇಲ್ಲಿ ಹಾಕಲಾಗಿದ್ದು, ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಉತ್ಪಾದಿಸುವ ವಸ್ತುಗಳಿಗೆ ಪ್ರೋತ್ಸಾಹಿಸುವುದು ಮತ್ತು ಅವರ ಆದಾಯೋತ್ಪನ್ನ ಚಟುವಟಿಕೆಗೆ ವೇದಿಕೆ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಇಲ್ಲಿ ವಿಶೇಷವಾಗಿ ಬಳ್ಳಾರಿ ಜಿಲ್ಲೆಯ ಮೇಣದ ದೀಪಗಳು ಮತ್ತು ಪಣತಿಗಳು, ಕೊಪ್ಪಳ ಜಿಲ್ಲೆಯ ಕಿನ್ನಾರ ಗೊಂಬೆಗಳು, ಬೀದರ ಜಿಲ್ಲೆಯ ಕಸೂತಿ ವಸ್ತುಗಳು, ರಾಯಚೂರು ಜಿಲ್ಲೆಯ ಮುತ್ತಿನ ಆಭರಣಗಳು, ಯಾದಗಿರಿ ಜಿಲ್ಲೆಯ ಲಂಬಾಣಿ ಉಡುಪುಗಳು ಹಾಗೂ ಕಲಬುರಗಿ ಜಿಲ್ಲೆಯ ಮನೆಯಲ್ಲಿ ತಯಾರಿಸಿದ ಮೆಹೆಂದಿ ಡಿಸೈನ್ ಸೋಪ್‍ಗಳು ಮಾರಾಟಕ್ಕಿವೆ.
ಇದಲ್ಲದೆ ಮಹಿಳೆಯರು ತಯಾರಿಸಿದಂತಹ ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು, ವಿವಿಧ ಬಗೆಯ ಆಹಾರ ತಿಂಡಿ ತಿನಿಸುಗಳು, ಮಹಿಳೆಯರ ಉಡುಪುಗಳು, ಕೈಮಗ್ಗದ ಸೀರೆಗಳು, ಮುತ್ತಿನ ಹಾರಗಳು, ವಿವಿಧ ಬಗೆಯ ಉಪ್ಪಿನಕಾಯಿಗಳು, ಕಲಬುರಗಿ ಸ್ಪೆಷಲ್ ರೊಟ್ಟಿ, ಶೇಂಗಾ, ಹಿಂಡಿ, ಶಾವಿಗೆ, ಹಪ್ಪಳ, ಹೀಗೆ ವಿವಿಧ ಬಗೆಯ ಉತ್ಪನ್ನಗಳನ್ನು ಮಾರಾಟ ಮೇಳದಲ್ಲಿ ಕಾಣಬಹುದಾಗಿದೆ.