
ರಾಯಚೂರು.ಅ.೦೩-ವ್ಯಕ್ತಿಯು ಶಾರೀರಿಕ ಬೆಳವಣಿಗೆಗೆ ಕ್ರೀಡೆಯು ಅತ್ಯಂತ ಮುಖ್ಯವಾಗಿದ್ದು, ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಹೆಚ್ಚಿನ ಸಾಧನೆಯನ್ನು ಸಾಧಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಹೇಳಿದರು.
ಅವರು ಅ.೩ರ(ಮಂಗಳವಾರ)ದಂದು ನಗರದ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಯಚೂರು ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ೨೦೨೩-೨೪ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಸಸಿಗೆ ನೀರು ಹಾಕುವ ಮೂಲಕ ಹಾಗೂ ಸಾಂಕೇತವಾಗಿ ಬ್ಯಾಡ್ಮಿಂಟನ್ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಆತ್ಮ ವಿಶ್ವಾಸದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಭಾಗವಹಿಸುವಿಕೆ ಅತ್ಯಂತ ಮುಖ್ಯ ಆದ್ದರಿಂದ ಕ್ರೀಡಾಪಟುಗಳು ಆತ್ಮ ವಿಶ್ವಾಸದಿಂದ ಪಾಲ್ಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ, ರಾಯಚೂರು ಬ್ಯಾಡ್ಮಿಂಟನ್ ಕ್ಲಬ್‌ನ ಪದಾಧಿಕಾರಿಗಳಾದ ಶಿವಕುಮಾರ ಪಾಟೀಲ್, ರಂಗಲಿಂಗನಗೌಡ, ಆರ್.ವೆಂಕಟಸ್ವಾಮಿ, ಜಯಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.