ವಿಭಾಗೀಯ ಕಚೇರಿ ಸೇರಿ ರೈಲ್ವೆ ಬೇಡಿಕೆಗಳಿಗಾಗಿ ಜು. 1ರಂದು ಸತ್ಯಾಗ್ರಹ

ಕಲಬುರಗಿ:ಜೂ.29: ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಹಾಗೂ ಇತರೆ ರೈಲ್ವೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜುಲೈ 1ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕೈಗಾರಿಕಾ ಮತ್ತು ವಾಣಿಜ್ಯ ಸಮಿತಿಯ ಜಿಲ್ಲಾಧ್ಯಕ್ಷ ಅಮನಾಥ್ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಜನಪ್ರತಿನಿಧಿಗಳು, ಎಲ್ಲ ಸಂಘ, ಸಂಸ್ಥೆಗಳು, ಜನರ ಹೋರಾಟದ ಸಂಘಟನೆಗಳು, ಎಲ್ಲ ತರಹದ ವೃತ್ತಿಪರರು, ಬುದ್ದಿಜೀವಿಗಳು, ಹಿತಚಿಂತಕರು ಹೋರಾಟವನ್ನು ಬೆಂಬಲಿಸಬೇಕು ಎಂದು ಕೋರಿದರು.
1984ರಲ್ಲಿ ನ್ಯಾಯಮೂರ್ತಿ ಸರಿನ್ ಸಮಿತಿಯು ಕಲಬುರ್ಗಿ ರೈಲ್ವೆ ವಿಭಾಗವೂ ಸೇರಿದಂತೆ ಕೆಲ ಹೊಸ ವಲಯಗಳನ್ನು ಮತ್ತು ವಿಭಾಗಗಳನ್ನು ಕಾರ್ಯಾಚರಣೆಗೆ ಶಿಫಾರಸ್ಸು ಮಾಡಿತ್ತು. 2003-2004ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿನ ಎನ್‍ಡಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ನಿತೀಶಕುಮಾರ್, ಬಸವರಾಜ್ ಪಾಟೀಲ್ ಯತ್ನಾಳ್ ಅವರು ಆ ಘೋಷಣೆ ಮಾಡಲು ಹಾಗೂ ನಿರ್ವಹಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು. ಅದು ಕೊನೆಯ ಕ್ಷಣದಲ್ಲಿ ಪ್ರಸ್ತಾವನೆ ಕೈಬಿಡಲಾಗಿತ್ತು ಎಂದು ಅವರು ಹೇಳಿದರು.
2013ರ ಡಿಸೆಂಬರ್‍ನಲ್ಲಿ ರೈಲ್ವೆ ಸಚಿವರಾಗಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ರೈಲ್ವೆ ಬಜೆಟ್‍ನಲ್ಲಿ ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿಯನ್ನು ಘೋಷಿಸಿದರು. ಐದು ಕೋಟಿ ರೂ.ಗಳನ್ನೂ ಮಂಜೂರು ಮಾಡಿದರು. ಆದಾಗ್ಯೂ, ಆ ಪ್ರಸ್ತಾವನೆಯೂ ಸಹ ನೆನೆಗುದಿಗೆ ಬಿದ್ದಿದೆ. 2014ರ ಫೆಬ್ರವರಿಯಲ್ಲಿ ಘೋಷಿತ ರೈಲ್ವೆ ವಿಭಾಗೀಯ ಕಚೇರಿಗೆ 2014ರ ಮಾರ್ಚ್‍ನಲ್ಲಿ ಅಗತ್ಯ ಸ್ಥಳವನ್ನೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. 2014ರ ಏಪ್ರಿಲ್ 10ರಂದು ವಿಭಾಗದ ಅಂದಾಜುಗಳು ಮತ್ತು ಅಧಿಕಾರ ವ್ಯಾಪ್ತಿಯೊಂದಿಗೆ ರೈಲ್ವೆ ಮಂಡಳಿಗೆ ವಿವರ ಯೋಜನಾ ವರದಿಯನ್ನು ಸಲ್ಲಿಸಿದ್ದಾರೆ. 2014ರ ಏಪ್ರಿಲ್ 30ರಂದು ರೈಲ್ವೆ ಮಂಡಳಿಯು ಡಿಪಿಆರ್‍ನ್ನು ಪರಿಗಣಿಸಿತು. ಅದೇ ವರ್ಷದ ಆಗಸ್ಟ್ 7ರಂದು ವಿಭಾಗದ ಅಧಿಕಾರ ವ್ಯಾಪ್ತಿಯನ್ನು ಉಲ್ಲೇಖಿಸಿತು. 2016ರ ಮಾರ್ಚ್ 4ರಂದು ರೈಲ್ವೆ ವಿಭಾಗದ ಕಾರ್ಯಾಚರಣೆಗೆ ಕ್ರಮವನ್ನು ಪ್ರಾರಂಭಿಸಲಾಯಿತು. ಡಿಪಿಆರ್ ಸಹ ಸಿದ್ಧಪಡಿಸಲಾಗಿತ್ತು ಎಂದು ಅವರು ವಿವರಿಸಿದರು.
ಕಳೆದ 2019ರ ನವೆಂಬರ್ 20ರಂದು ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ರೈಲ್ವೆ ವಿಭಾಗದ ಅಧಿಕಾರ ವ್ಯಾಪ್ತಿಯ ಒಪ್ಪಂದವನ್ನು ಪುನರುಚ್ಛರಿಸಿತು. 2021ರ ಮಾರ್ಚ್ 17ರಂದು ಹಣಕಾಸು, ಆಡಳಿತಾತ್ಮಕ ಮತ್ತು ಇತರೆ ಅಂಶಗಳ ಎಲ್ಲ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಿ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ಆದಾಗ್ಯೂ, ಕಲಬುರ್ಗಿ ವಿಭಾಗವನ್ನು ಕೈಬಿಡಬಹುದೆಂಬ ಶಿಫಾರಸ್ಸನ್ನು ಸಕ್ಷಮ ಪ್ರಾಧಿಕಾರವು ಅಂಗೀಕರಿಸಿ ಭಾರೀ ಹೊಡೆತ ಕೊಟ್ಟಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇಲಾಖೆಯ ವರದಿ ಪ್ರಕಾರ ನಮ್ಮ ಪ್ರಾಂತದಿಂದ ಕಳೆದ 11 ವರ್ಷಗಳಲ್ಲಿ 2019-2020ರವರೆಗೆ 8025.36 ಕೋಟಿ ರೂ.ಗಳ ಹಣ ಸಂಗ್ರಹವಾಗಿದೆ. ಕಲಬುರ್ಗಿ ರೈಲು ನಿಲ್ದಾಣವು ಬೆಂಗಳೂರು, ಯಶವಂತಪೂರ್, ಮಂಗಳೂರು ನಿಲ್ದಾಣಗಳ ನಂತರ ಕರ್ನಾಟಕದಲ್ಲಿ ನಾಲ್ಕನೇ ಅತೀ ಹೆಚ್ಚು ಆದಾಯದ ಮೂಲ ನಿಲ್ದಾಣವಾಗಿದೆ. ಅದರ ಆದಾಯ ಮೈಸೂರು ಮತ್ತು ಹುಬ್ಬಳ್ಳಿ ವಲಯಗಳಿಗಿಂತ ಹೆಚ್ಚು. ಆದಾಘ್ಯೂ, ಕಲಬುರ್ಗಿಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಇರುವ ಐದು ವಲಯಗಳಲ್ಲಿ ಕಲಬುರ್ಗಿ ವಿಭಾಗದ ರೈಲ್ವೆಯು ಹರಿದು ಹಂಚಿ ಹೋಗಿದೆ. ಹೀಗಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ಸೊಲ್ಲಾಪೂರ್ ರೈಲ್ವೆ ವಿಭಾಗ ಮತ್ತು ಕೇಂಧ್ರ ರೈಲ್ವೆಯು ನಿರಂತರವಾಗಿ ನಿರ್ಲಕ್ಷಿಸುತ್ತಿದೆ. 2ನೇ ಪಿಟ್ ಲೈನ್ ಟೆಂಡರ್ ರದ್ದುಗೊಳಿಸಲಾಗಿದೆ. ಸೊಲ್ಲಾಪುರ ವಿಭಾಗವನ್ನು ಹೆಚ್ಚಿಸಲು ರೈಲ್ವೆ ಆಡಳಿತ ಕಟ್ಟಡವನ್ನು ರದ್ದುಗೊಳಿಸಲಾಗಿದೆ. ಮಲ್ಟಿ- ಫಂಕ್ಷನಲ್ ಕಾಂಪ್ಲೆಕ್ಸ್ ಟೆಂಡರ್ ರದ್ದುಪಡಿಸಲಾಗಿದೆ. 2015ರಿಂದ ಎರಡು ಲಿಫ್ಟ್‍ಗಳ ಟೆಂಡರ್‍ಗೆ ಅವಕಾಶ ಕಲ್ಪಿಸಲಾಗಿದೆ. ಕಲಬುರ್ಗಿ ನಿಲ್ದಾಣಕ್ಕೆ ಹೊಸ ರೈಲು ಸೌಲಭ್ಯ ಕಲ್ಪಿಸಿಲ್ಲ. ಕಳೆದ 2021ರ ಜುಲೈನಲ್ಲಿ ಸಿಕಂದರಾಬಾದ್- ಚಿತ್ತಾಪುರ ಮೆಮುವನ್ನು ಕಲಬುರ್ಗಿಯವರೆಗೆ ವಿಸ್ತರಿಸಲು ದಕ್ಷಿಣ ಮದ್ಯ ರೈಲ್ವೆ ಅನುಮೋದನೆ ನೀಡಿದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.
ಬಹುಮುಖ್ಯವಾಗಿ ಬಸವ ಎಕ್ಸ್‍ಪ್ರೆಸ್, ಸೊಲ್ಲಾಪೂರ್, ಹಾಸನ್ ಹಾಗೂ ಉದ್ಯಾನ್ ಎಕ್ಸ್‍ಪ್ರೆಸ್ ಬೆಂಗಳೂರಿಗೆ ತೆರಳುವ ರೈಲುಗಳು ಅತೀ ಮುಖ್ಯವಾಗಿ ಎರಡು ರೈಲುಗಳಂತೂ ಶತ ಪ್ರತಿಶತ: ಕಲಬುರ್ಗಿಯಿಂದಲೇ ಪ್ರಯಾಣಿಕರಿಂದ ಭರ್ತಿ ಆಗುತ್ತವೆ. ಆದಾಗ್ಯೂ, ಕಾಯ್ದಿರಿಸಿದ ಕೋಟಾ ಗಣನೆಗೆ ತೆಗೆದುಕೊಂಡರೆ ಮಲತಾಯಿ ಧೋರಣೆ ಸ್ಪಷ್ಟವಾಗುತ್ತದೆ. ಆದ್ದರಿಂದ ಕೂಡಲೇ ಬೀದರ್- ಕಲಬುರ್ಗಿ- ಬೆಂಗಳೂರು, ಕಲಬುರ್ಗಿ- ಬೆಂಗಳೂರು ಶತಾಬ್ದಿ, ಕಲಬುರ್ಗಿ- ಬೆಂಗಳೂರು- ಒಂದೇ ಭಾರತ, ಮುಂಬಯಿ- ಸೊಲ್ಲಾಪೂರ್ ಒಂದೇ ಭಾರತ (ಕಲಬುರ್ಗಿಯವರೆಗೆ ವಿಸ್ತರಿಸುವುದು), ಬೀದರ್- ಕಲಬುರ್ಗಿ- ಹೊಸಪೇಟೆ ಇಂಟರ್‍ಸಿಟಿ, ಬೀದರ್- ಕಲಬುರ್ಗಿ- ಮಂಗಳೂರು, ರಾಯಚೂರು- ಕಲಬುರ್ಗಿ- ಮುಂಬಯಿ, ಸಿಕಿಂದ್ರಾಬಾದ್- ಚಿತ್ತಾಪುರ ರೈಲು ಕಲಬುರ್ಗಿಯವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆನಂದ್ ದಂಡೋತಿ, ಭೀಮರಾವ್ ಧಂಗಾಪೂರ್, ಚಂದ್ರಶೇಖರ್ ಬಿಜಾಪೂರೆ, ಲಿಂಗರಾಜ್ ಭಾವಿಕಟ್ಟಿ, ಎಮ್.ಎಸ್. ಪಾಟೀಲ್ ನರಿಬೋಳ್ ಮುಂತಾದವರು ಉಪಸ್ಥಿತರಿದ್ದರು.