ವಿಪ ಚುನಾವಣೆ: ಟಿಕೇಟ್ ನೀಡಲು ಆಗ್ರಹ


ಬಾದಾಮಿ, ನ19: ಬರುವ ಡಿ.10 ರಂದು ನಡೆಯಲಿರುವ ಬಾಗಲಕೋಟೆ ವಿಜಯಪುರ ಅವಳಿ ಜಿಲ್ಲೆಯ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ದೊಡ್ಡ ಸಮುದಾಯವಾಗಿರುವ ಹಾಲುಮತ ಕುರುಬ ಸಮುದಾಯದವರಿಗೆ ಟಿಕೇಟ್ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮಂತ ಅಪ್ಪನ್ನವರ ಬಿಜೆಪಿ ಕಾಂಗ್ರೆಸ್ ಎರಡು ರಾಜಕೀಯ ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.
ಅವರು ಗುರುವಾರ ನಗರದ ಕಾನಿಪ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅವಳಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ 4-5 ಜನ ಸಮುದಾಯದ ನಾಯಕರು ಪ್ರಬಲ ಆಕಾಂಕ್ಷಿಗಳಾಗಿದ್ದು, ಇದರಲ್ಲಿ ನಮ್ಮ ಸಮುದಾಯಕ್ಕೆ ಟಿಕೇಟ್ ನೀಡಿದ ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿದ ಅವರು ಬಹುತೇಕ ಗ್ರಾಮ ಪಂಚಾಯತಿ ಸದಸ್ಯರು ಹಾಲುಮತ ಕುರುಬ ಸಮಾಜದವರಾಗಿದ್ದು, ನಮ್ಮ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹನಮಂತ ಜೋಗಿನ, ನವೀನ ಬಂಕನೇರಿ, ಬಸವರಾಜ ದ್ಯಾಮನ್ನವರ ಹಾಜರಿದ್ದರು.