ವಿಪ ಚುನಾವಣೆ: ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ


ಹುಬ್ಬಳ್ಳಿ, ನ 23: ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳನ್ನು ಪ್ರತಿನಿಧಿಸುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್, ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಹಾಗೂ ಕೆಲ ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಮುಂಜಾನೆ ಪ್ರದೀಪ್ ಶೆಟ್ಟರ್ ಧಾರವಾಡ ಜಿಲ್ಲಾಧಿಕಾರಿ ಕಛೇರಿವರೆಗೂ ಮೆರವಣಿಗೆ ಮೂಲಕ ತೆರಳಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಸಿ.ಸಿ. ಪಾಟೀಲ, ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಅಮೃತ್ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಮುಂಜಾನೆ ಹುಬ್ಬಳ್ಳಿಯ ಮಠಗಳು ಹಾಗೂ ದರ್ಗಾಗಳಿಗೆ ಭೇಟಿ ನೀಡಿ, ನಂತರ ಧಾರವಾಡಕ್ಕೆ ತೆರಳಿ ಜಿಲ್ಲಾಧಿಕಾಗಳ ಕಛೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಶಾಸಕರಾದ ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಎಂ.ಎಂ. ಹಿರೇಮಠ, ವೀರಣ್ಣ ಮತ್ತಿಕಟ್ಟಿ, ಅನಿಲಕುಮಾರ್ ಪಾಟೀಲ್, ಅಲ್ತಾಫ ಹಳ್ಳೂರ, ಸಿ.ಎಸ್. ಮೆಹಬೂಬ ಬಾಷಾ, ಅಲ್ತಾಫ್‍ನವಾಜ್ ಎಂ. ಕಿತ್ತೂರ, ಸದಾನಂದ ಡಂಗನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.