ವಿಪಕ್ಷ ನಾಯಕರ ವಿರುದ್ಧ ಸಿಸಿಪಾ ಕಿಡಿ

ಬೆಂಗಳೂರು,ಜ.೬- ವಿಧಾನಸೌಧದಲ್ಲಿ ಲೋಕೋಪಯೋಗಿ ಇಂಜಿನಿಯರ್ ಒಬ್ಬರಲ್ಲಿ ಹಣ ಪತ್ತೆಯಾದ ವಿಚಾರಕ್ಕೂ ತಮಗೂ ತಳಕು ಹಾಕುತ್ತಿರುವ ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿರುವ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ವಿಧಾನಸೌಧದ ಹೊರಗೆ ಹಣ ಸಿಕ್ಕಿರುವುದು. ವಿಪಕ್ಷ ನಾಯಕರಿಗೆ ಕೊಡಲು ಹೋಗಿರಬಹುದು ಎಂದು ನಾನೂ ಹೇಳಬಹುದಲ್ವಾ ಎಂದು ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯರವರು, ಲೋಕೋಪಯೋಗಿ ಸಚಿವರಿಗೆ ಕೊಡಲು ಹೋಗಿರಬಹುದು ಎಂದು ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ಹಣ ಸಿಕ್ಕಿರುವುದು ಹೊರಗೆ, ನಾನು ಸಿದ್ದರಾಮಯ್ಯರವರಿಗೆ ಕೊಡಲು ಹೋಗಿರಬಹುದು ಎಂದು ಹೇಳಬಹುದು.
ತನಿಖೆಯಾಗಲಿ ಎಲ್ಲ ಗೊತ್ತಾಗುತ್ತದೆ ಎಂದರು.ವಿರೋಧ ಪಕ್ಷದವರಿಗೆ ಚುನಾವಣಾ ಸಂದರ್ಭದಲ್ಲಿ ಆರೋಪ ಮಾಡಲು ಇದೊಂದು ಅವಕಾಶ. ಪೊಲೀಸರು ಹಣ ಸಿಕ್ಕ ಇಂಜಿನಿಯರ್‌ನ್ನು ಬಂಧಿಸಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದ ಅವರು, ವಿಪಕ್ಷ ನಾಯಕರು ಆಧಾರವಿಲ್ಲದೆ ಆರೋಪ ಮಾಡುವುದು ಸರಿಹೋಗಲ್ಲ ಎಂದರು.
ಮೀಸಲಾತಿ ತೀರ್ಮಾನ
ಲಿಂಗಾಯತ ಪಂಚಮಸಾಲಿ ೨ಎ ಮೀಸಲಾತಿಗೆ ಸಂಬಂಧಿಸಿದಂತೆ ಜಯಮೃತ್ಯುಂಜಯ ಸ್ವಾಮೀಜಿ ಅವರು ೨೪ ಗಂಟೆಗಳ ಗಡುವು ಬಿಟ್ಟು ಮಾತುಕತೆಗೆ ಬಂದರೆ ನಾನೇ ಮಧ್ಯಸ್ಥಿಗೆ ವಹಿಸುತ್ತೇನೆ. ಇಂದು ಮುಖ್ಯಮಂತ್ರಿಗಳ ಜತೆ ಈ ಬಗ್ಗೆ ಮಾತನಾಡುತ್ತೇನೆ. ಮುಖ್ಯಮಂತ್ರಿಗಳ ಮನಸ್ಸಿನಲ್ಲಿ ಏನೋ ಪರಿಹಾರವಿದೆ. ಅವರು ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡಲ್ಲ ಎಂಬ ವಿಶ್ವಾಸವು ಇದೆ ಎಂದರು.ಈ ಹಿಂದೆ ಬಸವರಾಜ ಬೊಮ್ಮಾಯಿರವರು ಗೃಹ ಸಚಿವರಾಗಿದ್ದಾಗ ಜಯಮೃತ್ಯುಂಜಯ ಸ್ವಾಮೀಜಿಗಳ ಪಾದಯಾತ್ರೆಗೆ ಬೆಂಬಲ ಕೊಟ್ಟಿದ್ದರು. ಅಂದು ಅರಮನೆ ಮೈದಾನದಲ್ಲಿ ಸಮಾರೋಪಕ್ಕೆ ಅನುಮತಿ ಕೇಳಲು ಮರೆತಿದ್ದರೂ ಸಹಕಾರ ನೀಡಿದ್ದರು ಎಂಬುದನ್ನು ನೆನಪಿಸಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ಬರಲು ತಡವಾಯಿತು. ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ. ಹೋರಾಟ ಮಾಡೋದು ಸರಿಯಲ್ಲ. ಪ್ರಾಮಾಣಿಕತೆಯಿಂದ ಸ್ವಾಮೀಜಿ ಅವರನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ ಎಂದರು.