ವಿಪಕ್ಷ ನಾಯಕನ ಆಯ್ಕೆ ಬಿಜೆಪಿಗೆ ಕಗ್ಗಂಟು ಸ್ಟಮಕ್ ಸಭೆ ನಾಳೆಗೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೩- ವಿಧಾನಸಭೆ ಹಾಗೂ ವಿಧಾನಪರಿಷತ್‌ನ ವಿಪಕ್ಷ ನಾಯಕನ ಆಯ್ಕೆ ಮತ್ತೆ ಮೂಂದಕ್ಕೆ ಹೋಗಿದೆ.
ವಿಪಕ್ಷ ನಾಯಕನ ಆಯ್ಕೆಗೆ ಇಂದು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ನಾಳೆಗೆ ಮುಂದೂಡಲಾಗಿದ್ದು, ನಾಳೆ ವಿಪಕ್ಷ ನಾಯಕನ ಆಯ್ಕೆ ಆಗಲಿದೆ.
ವಿಪಕ್ಷ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ವರಿಷ್ಠರು ಕಸರತ್ತು ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನಿನ್ನೆ ದೆಹಲಿಗೆ ಕರೆಸಿಕೊಂಡು ಅವರ ಜತೆಯೂ ಚರ್ಚೆ ನಡೆಸಿದ್ದರು. ಇಷ್ಟೆಲ್ಲಾ ಆದರೂ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿಯೇ ಉಳಿದಿತ್ತು.ಹಾಗಾಗಿ ವರಿಷ್ಠರು ಕರ್ನಾಟಕಕ್ಕೆ ವೀಕ್ಷರನ್ನು ಕಳುಹಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ನಂತರವೇ ವಿಪಕ್ಷ ನಾಯಕನ ಆಯ್ಕೆ ಮಾಡುವ ತೀರ್ಮಾನ ಕೈಗೊಂಡಿದ್ದರು.
ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ಕಾವಡೆ ಇವರುಗಳನ್ನು ವೀಕ್ಷರನ್ನಾಗಿ ಕಳುಹಿಸುವ ತೀರ್ಮಾನವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೈಗೊಂಡಿದ್ದರು. ಅದರಂತೆ ಈ ಇಬ್ಬರು ವೀಕ್ಷಕರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು ನಾಳೆ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವರು.ವೀಕ್ಷಕರ ಸಮ್ಮುಖದಲ್ಲೇ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಗಳು ನಡೆಯಲಿದ್ದು, ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸುವ ವೀಕ್ಷಕರುಗಳು ಕೇಂದ್ರ ನಾಯಕರಿಗೆ ಎಲ್ಲದರ ಬಗ್ಗೆಯೂ ವರದಿ ನೀಡುವರು.ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಶಾಸಕರ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ವೀಕ್ಷಕರು ನೀಡುವ ವರದಿ ಆಧರಿಸಿ ವರಿಷ್ಠರು ವಿಪಕ್ಷ ನಾಯಕನ ಆಯ್ಕೆಯನ್ನು ಅಂತಿಮಗೊಳಿಸಲಿದ್ದು, ನಾಳೆ ವಿಪಕ್ಷ ನಾಯಕನ ಹೆಸರು ಪ್ರಕಟವಾಗಲಿದೆ.

ಬಿಜೆಪಿಯಲ್ಲಿ ಗುಂಪುಗಾರಿಕೆ ಸಿದ್ದು ವ್ಯಂಗ್ಯ

ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಇನ್ನೂ ಆಯ್ಕೆ ಆಗದಿರುವುದನ್ನು ನೋಡಿದರೆ ಬಿಜೆಪಿಯಲ್ಲಿ ಗುಂಪುಗಾರಿಕೆ ಇರುವುದು ಸ್ಪಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿಂದು ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಮೂವರು ನೂತನ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಗುಂಪುಗಾರಿಕೆಯಿಂದ ಇನ್ನೂ ವಿಪಕ್ಷ ಸ್ಥಾನಕ್ಕೆ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳುತ್ತಾರೆ. ಬಿಜೆಪಿಗಿಂತ ದೊಡ್ಡ ಅಶಿಸ್ತಿನ ಪಕ್ಷ ಮತ್ತೊಂದಿಲ್ಲ ಎಂದು ಅವರು ಟೀಕಿಸಿದರು.
ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಬಿಜೆಪಿ ಯಾರನ್ನು ಯಾವಾಗ ಆಯ್ಕೆ ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.