ವಿಪಕ್ಷಗಳ ವಿರುದ್ಧ ಹೋರಾಟಕ್ಕೆ ಬಿಜೆಪಿ ನಿರ್ಣಯ

ನವದೆಹಲಿ,ಜ.೧೭- “ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಷ್ಠೆಗೆ ಹಾನಿ ಮಾಡಲು ಪ್ರತಿಪಕ್ಷಗಳು ನಕಾರಾತ್ಮಕ ಪ್ರಚಾರ ಮಾಡುತ್ತಿವೆ. ಇದರ ವಿರುದ್ದ ಹೋರಾಟ ಮಾಡಲು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜಕೀಯ ನಿರ್ಣಯ ಕೈಗೊಳ್ಳಲಾಗಿದೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಪ್ರಸ್ತಾಪಿಸಿದ ನಿರ್ಣಯವನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕರ್ನಾಟಕದ ಜಲಸಂನ್ಮೂಲ ಸಚಿವ ಗೋವಿಂದ್ ಕಾರಜೋಳ ಬೆಂಬಲಿಸಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು “ಅಕ್ಷಯ ನಾಯಕ” ಎಂದು ನೋಡಲಾಗುತ್ತದೆ ಮತ್ತು ಅವರ ನಾಯಕತ್ವದಲ್ಲಿ ರಾಷ್ಟ್ರದ ಇಮೇಜ್ ಅನ್ನು ಹೆಚ್ಚಿಸಲಾಗಿದೆ ಎನ್ನುವ ನಿರ್ಣಯ ಅಂಗೀಕಾರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ವಿರುದ್ದ ಮಾಡುತ್ತಿರುವ ನಕಾರಾತ್ಮಕ ಪ್ರಚಾರವನ್ನು ಹಿಮ್ಮೆಟ್ಟಿಸಲು ಮತ್ತು ಅದಕ್ಕೆ ತಕ್ಕ ಉತ್ತರ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು “ವೈಯಕ್ತಿಕವಾಗಿ” “ಹಾನಿ” ಮಾಡಲು ಪ್ರತಿಪಕ್ಷಗಳು “ನಕಾರಾತ್ಮಕ ಪ್ರಚಾರ” ನಡೆಸುತ್ತಿವೆ ಮತ್ತು ಸರ್ಕಾರದ ವಿರುದ್ಧ ನಿಂದನೀಯ ಪದ ಬಳಸುತ್ತಿವೆ ಎಂದು ಆರೋಪಿಸಿರುವ ಅವರು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರತಿಪಾದಿಸಿದ್ದಾರೆ.
ರಫೇಲ್ ಸಮಸ್ಯೆ, ನೋಟು ಅಮಾನ್ಯೀಕರಣ, ಜಾರಿ ನಿರ್ದೇಶನಾಲಯದಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು, ಸೆಂಟ್ರಲ್ ವಿಸ್ಟಾ ಯೋಜನೆ, ಅಥವಾ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಪ್ರಧಾನಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.