ನವದೆಹಲಿ,ಏ.೬-ದೇಶದಲ್ಲಿ ಹಲವು ವಿರೋಧಗಳು ಪಕ್ಷ ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಿವೆ ಎಂದು ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷ ಮಾತ್ರ ದೇಶ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಇಂದಿಲ್ಲಿ ಹೇಳಿದ್ದಾರೆ.ಜಮ್ಮು ಕಾಶ್ಮೀರಕ್ಕೆ ನೀಡಿದ್ದ ೩೭೦ನೇ ವಿಧಿ ಮುಂದೊಂದು ದಿನ ಇತಿಹಾಸವಾಗಲಿದೆ ಎಂದು ಪ್ರತಿಪಕ್ಷಗಳು ಊಹಿಸಿರಲಿಲ್ಲ. ಬಿಜೆಪಿ ಮಾಡುತ್ತಿರುವ ಕೆಲಸಗಳನ್ನು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಮತ್ತಷ್ಟು ಹತಾಶರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿ ಪಕ್ಷದ ೪೪ನೇ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಅವರು ಪ್ರತಿ ಪಕ್ಷಗಳ ನಾಯಕರು ಬಹಿರಂಗವಾಗಿ ’ಮೋದಿ ತೇರಿ ಕಬ್ರ್ ಖುದೇಗಿ’ ಎಂದು ಹೇಳಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ
ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಿಜೆಪಿ ಪಕ್ಷ ಭಗವಾನ್ ಹನುಮಂತನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಿದರು.
ಸಾಗರದಂತಹ ದೊಡ್ಡ ಸವಾಲುಗಳನ್ನು ಎದುರಿಸಲು ಭಾರತ ಹೆಚ್ಚು ಬಲಿಷ್ಠವಾಗಿದೆ.ಅದಕ್ಕೆ ಹನುಮಂತನ ಶಕ್ತಿಯಂತೆ ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಮುನ್ನೆಡದಿದೆ ಎಂದಿದ್ದಾರೆ.ನಾವು ಹನುಮಂತನ ಸಂಪೂರ್ಣ ಜೀವನವನ್ನು ನೋಡಿದರೆ, ಅವರು ಎಲ್ಲಾ ರೀತಿಯ ಯಶಸ್ಸನ್ನು ತರಲು ಸಹಾಯ ಮಾಡುವ ಮನೋಭಾವವನ್ನು ಹೊಂದಿದ್ದರು,ನಮ್ಮ ಪಕ್ಷ ಮತ್ತು ನಮ್ಮ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಹನುಮಾನ್ ಜಿಯವರ ಮೌಲ್ಯಗಳು ಮತ್ತು ಬೋಧನೆಗಳಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
೮೦ ಕೋಟಿ ಜನರಿಗೆ ಪಡಿತರ:
ಬಿಜೆಪಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಹೊಂದಿದೆ ಇದೇ ಕಾರಣಕ್ಕಾಗಿ ದೇಶದ ೮೦ ಕೋಟಿ ಜನರಿಗೆ ಉಚಿತ ಪ್ರಯೋಜನ ನೀಡಲಾಗಿದೆ ಎಂದು ಹೇಳಿದ ಅವರು ಜನ್ ಧನ್ ಯೋಜನೆ ಮತ್ತು ಇತರ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದರು.ಬಿಜೆಪಿ ಅಧ್ಯಕ್ಷ ಜೆಪಿ ನಡ್ಡ ಮಾತನಾಡಿ ಬಿಜೆಪಿ ಒಂದು ರಾಜಕೀಯ ಪಕ್ಷವಾದರೂ ಇಂದು ಇಡೀ ರಾಷ್ಟ್ರದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪಕ್ಷವು ಅದ್ಭುತ ಸಾಧನೆಗಳನ್ನು ಮಾಡಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ “ಏಕ್ ಭಾರತ್ ಶ್ರೇಷ್ಠ ಭಾರತ್” ನಿಂದ ನಾವು ಸ್ಫೂರ್ತಿ ಪಡೆದಿದ್ದೇವೆ ಎಂದು ಅವರು ತಿಳಿಸಿದ್ದಾರೆ.