ಲೋಕಸಭಾ ಚುನಾವಣೆಗೆ ತಯಾರಿ
ನವದೆಹಲಿ,ಜೂ.೨೯:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ದೇಶದ ವಿರೋಧ ಪಕ್ಷಗಳು ಒಂದಾಗಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಮಂತ್ರ ಜಪಿಸುತ್ತಿರುವ ಬೆಳವಣಿಗೆಗಳ ನಡುವೆಯೇ ಬಿಜೆಪಿ ವಿಪಕ್ಷಗಳ ಕಾರ್ಯತಂತ್ರಕ್ಕೆ ಪ್ರತಿತಂತ್ರವನ್ನು ರೂಪಿಸುತ್ತಿದ್ದು, ಕೇಂದ್ರ ಸಚಿವ ಸಂಪುಟ ಮತ್ತು ಬಿಜೆಪಿಯ ಸಂಘಟನೆಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಲು ತಯಾರಿ ನಡೆಸಿದೆ.
ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿದ್ದು, ಹಾಗೆಯೇ, ಪಕ್ಷದ ಮಟ್ಟದಲ್ಲೂ ಕೆಲ ಮಹತ್ತರ ಬದಲಾವಣೆಗಳ ಸಾಧ್ಯತೆಗಳು ಹೆಚ್ಚಿವೆ. ಕೆಲ ಕೇಂದ್ರ ಸಚಿವರುಗಳಿಗೆ ಪಕ್ಷದಲ್ಲಿ ಮಹತ್ತರ ಜವಾಬ್ದಾರಿಗಳನ್ನು ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಹಾಗೆಯೇ, ಕರ್ನಾಟಕ, ಗುಜರಾತ್ ಸೇರಿದಂತೆ ಕೆಲ ರಾಜ್ಯಗಳ ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡುವ ಗ್ಗೆಯೂ ಚರ್ಚೆಗಳನ್ನು ನಡೆಸಲಾಗಿದೆ. ಜತೆಗೆ ಏಕರೂಪ ನಾಗರೀಕ ಸಂಹಿತೆ ವಿಚಾರವನ್ನು ಚುನಾವಣಾ ವಿಚಾರವಾಗಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ.ಸಂಸತ್‌ನ ಮಳೆಗಾಲದ ಅಧಿವೇಶನದ ಮುನ್ನವೇ ಸಚಿವ ಸಂಪುಟವನ್ನು ಪುನಾರಚಿಸುವ ಸಾಧ್ಯತೆಗಳಿವೆ.ಲೋಕಸಭಾ ಚುನಾವಣೆಗೆ ಸರ್ವಸನ್ನದ್ಧರಾಗಲು ಪಕ್ಷದಲ್ಲಿ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ತಡರಾತ್ರಿವರೆಗೂ ಹಿರಿಯ ನಾಗರಿಕರ ಜತೆ ಮಹತ್ವದ ಸಭೆ ನಡೆಸಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಏನೆಲ್ಲಾ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬ ಬಗ್ಗೆ ಪ್ರಧಾನಿ ಅವರು ಸಭೆಯಲ್ಲಿ ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಕ್ಷಣಾ ಸಚಿವ ರಾಜ್‌ನಾಥ್ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಪಾಲ್ಗೊಂಡಿದ್ದರು.
ನವದೆಹಲಿಯ ಪ್ರಧಾನಿ ನಿವಾಸದಲ್ಲಿ ನಡೆದ ಈ ಸಭೆ ನಿನ್ನೆ ತಡರಾತ್ರಿವರೆಗೂ ನಡೆದಿದ್ದು, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಂಪುಟದಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಹಾಗೆಯೇ ಪಕ್ಷದ ಸಂಘಟನೆಯಲ್ಲೂ ಕೆಲ ಬದಲಾವಣೆಗಳ ಬಗ್ಗೆ ಚರ್ಚೆ ನಡೆಯಿತು ಎಂದು ಬಿಜೆಪಿ ಮೂಲಗಳು ಹೇಳಿವೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಪ್ರಧಾನಿ ನರೇಂದ್ರಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ವಿವಿಧ ವಿರೋಧ ಪಕ್ಷಗಳ ಪ್ರಮುಖ ಮುಖಂಡರುಗಳು ಬಿಹಾರದ ಪಾಟ್ನಾದಲ್ಲಿ ಸಭೆ ನಡೆಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸಹ ಚುನಾವಣೆಯನ್ನು ಎದುರಿಸಲು ಏನೆಲ್ಲ ಮಾಡಬೇಕು, ವಿಪಕ್ಷಗಳ ಒಗ್ಗಟ್ಟನ್ನು ಎದುರಿಸಲು ಯಾವ ಕಾರ್ಯತಂತ್ರಗಳನ್ನು ರೂಪಿಸಬೇಕು. ಈಗಿನಿಂದಲೇ ಲೋಕಸಭಾ ಚುನಾವಣೆಗೆ ಏನೆಲ್ಲ ತಯಾರಿಗಳು ಆಗಬೇಕು ಎಂಬ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಸಮಗ್ರ ಚರ್ಚೆಗಳನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.
ಸಂಪುಟ ಪುನಾರಚನೆ
ಲೋಕಸಭಾ ಚುನಾವಣೆ ಹೊತ್ತಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆಗಳನ್ನು ಮಾಡುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಸಂಪುಟ ಪುನಾರಚಿಸಿ. ಹಿರಿಯ ಸಚಿವರುಗಳನ್ನು ಸಂಪುಟದಿಂದ ಕೈಬಿಟ್ಟು ಪಕ್ಷದಲ್ಲಿ ಜವಾಬ್ದಾರಿ ಸ್ಥಾನಗಳನ್ನು ನೀಡುವ ಸಾಧ್ಯತೆಗಳಿವೆ. ಕೇಂದ್ರ ಸಚಿವ ಸಂಪುಟ ಪುನಾರಚನೆಯಾದರೆ ಕೆಲ ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆಗಳು ಇವೆ.
ಪಕ್ಷದಲ್ಲೂ ಬದಲಾವಣೆ
ಚುನಾವಣಾ ತಯಾರಿಯ ಭಾಗವಾಗಿ ಪಕ್ಷದಲ್ಲೂ ಕೆಲ ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನು ಬದಲಿಸಿ ಹೊಸ ಮುಖಗಳಿಗೆ ಆಧ್ಯತೆ ನೀಡಿ, ಪಕ್ಷವನ್ನು ಬಲಪಡಿಸುವ ಬಗ್ಗೆಯೂ ಪ್ರಧಾನಿ ನರೇಂದ್ರಮೋದಿ ಹಿರಿಯ ನಾಯಕರುಗಳ ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ನೂತನ ರಾಜ್ಯಾಧ್ಯಕ್ಷರ ನೇಮಕ ಚರ್ಚೆ
ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿಯ ಕೇಂದ್ರ ನಾಯಕರು ರಾಜ್ಯದಲ್ಲಿ ಈಗಿರುವ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಅವರನ್ನು ಬದಲಿಸಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ದೆಹಲಿಯಲ್ಲಿ ನಿನ್ನೆ ರಾತ್ರಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಪಕ್ಷವನ್ನು ಬಲವಾಗಿ ಸಂಘಟಿಸುವ ಜತೆಗೆ ಮತದಾರರನ್ನು ಸೆಳೆಯುವ ಶಕ್ತಿ ಹೊಂದಿರುವ ನಾಯಕರನ್ನು ಪಕ್ಷದ ಅಧ್ಯಕ್ಷ ಗಾದಿಗೆ ಕೂರಿಸುವ ಬಗ್ಗೆ ಚರ್ಚೆಯಾಗಿದ್ದು, ಸದ್ಯದಲ್ಲೆ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕ ಆಗಲಿದೆ.ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದು, ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ಮಾಜಿ ಸಚಿವ ವಿ.ಸೋಮಣ್ಣ, ಸಿ.ಟಿ. ರವಿ, ಡಾ. ಸಿ.ಎನ್ ಅಶ್ವತ್ಥನಾರಾಯಣ, ರೇಣುಕಾಚಾರ್ಯ, ಸುನಿಲ್‌ಕುಮಾರ್, ಶಾಸಕ ಬಿ.ವೈ ವಿಜಯೇಂದ್ರ ಇವರುಗಳು ರೇಸ್‌ನಲ್ಲಿದ್ದು, ಇವರಲ್ಲಿ ಒಬ್ಬರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆ ಇದೆ.