ವಿಪಕ್ಷಗಳ ಆರೋಪಕ್ಕೆ ಗೂಳಿಗೌಡ ತಿರುಗೇಟು

ಬೆಂಗಳೂರು, ಅ. ೩೧- ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದರೂ ವಿಪಕ್ಷಗಳು ಅನಗತ್ಯವಾಗಿ ಸರ್ಕಾರದ ಮೇಲೆ ಆರೋಪಗಳನ್ನು ಮಾಡುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಏನೂ ಮಾಡೇ ಇಲ್ಲ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಅನಗತ್ಯ ಆರೋಪ ಮಾಡುತ್ತಿವೆ. ಇದು ಸರಿಯಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಈ ಸರ್ಕಾರ ನುಡಿದಂತೆ ನಡೆದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರದ ಪರ ಸದಾಭಿಪ್ರಾಯ ಮೂಡಿದೆ. ಹೀಗಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸಲು ಮುಂದಾಗಿರುವುದು ಆ ಪಕ್ಷಗಳ ಹತಾಶೆಯ ಸಂಕೇತವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಕಳೆದ ೫ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆಗಿರುವ ಅಂಕಿ-ಅಂಶಗಳನ್ನು ವಿಪಕ್ಷಗಳು ಗಮನಿಸಬೇಕು. ಸರ್ಕಾರ ಏನು ಮಾಡಿಲ್ಲ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಅನಗತ್ಯ ಆರೋಪ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳಿಗೆ ಅನ್ನ ಮತ್ತು ಆರ್ಥಿಕ ಶಕ್ತಿಯನ್ನು ನೀಡಿವೆ. ಮಹಿಳೆಯರು ಸರ್ಕಾರದ ಯೋಜನೆಗಳಿಂದ ಸಂತೃಷ್ಟರಾಗಿದ್ದಾರೆ ಎಂದಿರುವ ಅವರು, ಗ್ಯಾರಂಟಿ ಯೋಜನೆಗಳಿಂದ ಲಾಭ ಪಡೆದಿರುವ ಫಲಾನುಭವಿಗಳ ಬಗ್ಗೆ ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ೧ ಕೋಟಿ ೧೮ ಲಕ್ಷ ಕುಟುಂಬದ ಯಜಮಾನಿಯರಿಗೆ ಮಾಸಿಕ ೨ ಸಾವಿರ ರೂ. ಹಣ ಸಿಗುತ್ತಿದೆ. ಗೃಹಜ್ಯೋತಿ ಯೋಜನೆಯ ಲಾಭವನ್ನು ೧ ಕೋಟಿ ೫೨ ಲಕ್ಷ ಕುಟುಂಬಗಳು ಪಡೆದಿವೆ. ಅನ್ನಭಾಗ್ಯ ಯೋಜನೆಯ ಲಾಭ ಸುಮಾರು ೩ ಕೋಟಿ ೮೨ ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಶಕ್ತಿ ಯೋಜನೆಯಿಂದಲೂ ಮಹಿಳಾ ಪ್ರಯಾಣಿಕರು ರಾಜ್ಯಾದ್ಯಂತ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದುವರೆಗೂ ಸುಮಾರು ೮೬,೦೧,೧೧೦೦೦ ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ದಿನೇಶ್ ಗೂಳಿಗೌಡ ಹೇಳಿ, ಇನ್ನಾದರೂ ವಿಪಕ್ಷಗಳು ಅನಗತ್ಯ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದಿದ್ದಾರೆ.