ವಿಪಕ್ಷಗಳಿಂದ ಸದನ ಬಹಿಷ್ಕಾರ, ಧರಣಿ:ರಾಜ್ಯಪಾಲರಿಗೆ ದೂರು

(ಸಂಜೆವಾಣಿ ಪ್ರತಿನಿಧಿಯಿಂದ)
೧೦ ಮಂದಿ ಬಿಜೆಪಿ ಶಾಸಕರನ್ನು ಈ ಅಧಿವೇಶನದವರೆಗೆ ಅಮಾನತು ಮಾಡಿರುವುದನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ಮತ್ತು ವಿಧಾನ ಪರಷತ್ ಸದಸ್ಯರು ಇಂದು ಬೆಳಿಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ಬೆಂಗಳೂರು, ಜು. ೨೦-ಬಿಜೆಪಿಯ ಹತ್ತು ಶಾಸಕರನ್ನು ಈ ಅಧಿವೇಶನವದರೆಗೂ ಅಮಾನತು ಮಾಡಿರುವುದನ್ನು ಪ್ರತಿಭಟಿಸಿ ಉಭಯ ಸದನಗಳಲ್ಲಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಲಾಪಗಳನ್ನು ಬಹಿಷ್ಕರಿಸಿದೆ. ವಿಪಕ್ಷಗಳ ಬಹಿಷ್ಕಾರದ ನಡುವೆಯೇ ಇಂದು ವಿಧಾನಸಭೆಯ ಕಲಾಪಗಳು ನಡೆದಿವೆ. ವಿಪಕ್ಷಗಳ ಗೈರು ಹಾಜರಿಯಲ್ಲಿ ವಿತ್ತೀಯ ಕಲಾಪದ ಚರ್ಚೆಗಳು ಸದನದಲ್ಲಿ ನಡೆಯಿತು.ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಬಂದಿದ್ದ ವಿವಿಧ ರಾಜ್ಯಗಳ ರಾಜಕೀಯ ನಾಯಕರುಗಳಿಗೆ ಐಎಎಸ್ ಆತಿಥ್ಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಿನ್ನೆ ರಣರಂಪ ನಡೆದಿತ್ತು. ಹಾಗೆಯೇ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ೧೦ ಬಿಜೆಪಿ ಸದಸ್ಯರನ್ನು ಸಭಾಧ್ಯಕ್ಷರು ಅಮಾನತು ಮಾಡಿದ್ದರು. ಇದನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಲಾಪವನ್ನು ಬಹಿಷ್ಕರಿಸಿವೆ.ರಾಜ್ಯಪಾಲರಿಗೆ ದೂರು ನೀಡುವ ಮುನ್ನ ಸಭಾಧ್ಯಕ್ಷರ ಕ್ರಮವನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಉಭಯ ಸದನಗಳ ಸದಸ್ಯರು ಪಾಲ್ಗೊಂಡು ೧೦ ಮಂದಿ ಸದಸ್ಯರ ಅಮಾನತಿನ ಕ್ರಮವನ್ನು ಖಂಡಿಸಿದರು.ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಆರ್. ಅಶೋಕ್, ಅರಗ ಜ್ಞಾನೇಂದ್ರ, ಅಶ್ವತ್ಥ ನಾರಾಯಣ್, ಕೋಟಾ ಶ್ರೀನಿವಾಸ ಪೂಜಾರಿ, ಸುರೇಶ್‌ಕುಮಾರ್ ಸೇರಿದಂತೆ ಉಭಯ ಸದನಗಳ ಸದಸ್ಯರು ಸಭಾಧ್ಯಕ್ಷರ ಕ್ರಮದ ವಿರುದ್ಧ ಸಿಟ್ಟು ಪ್ರದರ್ಶಿಸಿದರು.ವಿಧಾನಮಂಡಲದ ಅಧಿವೇಶನ ನಾಳೆ ಮುಕ್ತಾಯಗೊಳ್ಳಲಿದ್ದು ಇಂದು ಮತ್ತು ನಾಳೆ ಎರಡೂ ದಿನ ಕಲಾಪ ಬಹಿಷ್ಕಾರ ಮಾಡುವ ತೀರ್ಮಾನವನ್ನು ಜೆಡಿಎಸ್- ಬಿಜೆಪಿ ಕೈಗೊಂಡಿದ್ದು, ಬಿಜೆಪಿ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದೆ.ವಿಧಾನಸಭೆಯಲ್ಲಿ ಐಎಎಸ್ ಆತಿಥ್ಯಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಗೆ ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಕೈಜೋಡಿಸಿ ಒಂದಾಗಿ ಹೋರಾಟ ನಡೆಸಿವೆ. ಅದರಂತೆ ಎರಡೂ ಪಕ್ಷಗಳು ಎರಡು ದಿನ ಕಲಾಪವನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಂಡಿವೆ.ಬಿಜೆಪಿ ಕಚೇರಿಯಲ್ಲಿಂದು ಬೆಳಗ್ಗೆ ಎಲ್ಲ ಶಾಸಕರ ಸಭೆ ನಡೆದಿದ್ದು ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗಿದ್ದು, ಕಲಾಪ ಬಹಿಷ್ಕಾರ, ರಾಜ್ಯಪಾಲರಿಗೆ ದೂರು ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ವಿಪಕ್ಷಗಳ ಗೈರು: ಕಲಾಪ ಆರಂಭ
ಇಂದು ಸದನದ ಕೋರಂ ಘಂಟೆ ಭಾರಿಸಿ ಸದನ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ಸಾಲಿನ ಆಸನಗಳು ಸಂಪೂರ್ಣ ಖಾಲಿ ಇದ್ದು, ಕಲ್ಯಾಣ ಪರಪ್ರಗತಿ ಪಕ್ಷದ ಜನಾರ್ಧನರೆಡ್ಡಿ ಅವರನ್ನು ಹೊರತುಪಡಿಸಿ ಉಳಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಎಲ್ಲ ಸದಸ್ಯರು ಸದನಕ್ಕೆ ಗೈರಾಗಿದ್ದರು.ವಿರೋಧ ಪಕ್ಷಗಳ ಸ ದಸ್ಯರ ಗೈರಿನ ನಡುವೆಯೇ ಸಭಾಧ್ಯಕ್ಷರು ಕಲಾಪ ನಡೆಸಿದ್ದು, ವಿತ್ತೀಯ ಕಲಾಪಗಳ ಮೇಲೆ ಸದನದಲ್ಲಿ ಚರ್ಚೆ ನಡೆದಿದೆ.ಈ ಚರ್ಚೆ ಪೂರ್ಣಗೊಂಡ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವರು.ಇದೇ ವೇಳೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಪರಿಷತ್ ಗೈರು ಹಾಜರಾಗಿದ್ದ ಘಟನೆ ನಡೆಯಿತು.ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಸಭಾಪತಿ ಬಸವರಾಜಹೊರಟ್ಟಿ ಪ್ರಶ್ನೋತ್ತರ ಕೈಗೆತ್ತಿಕೊಳ್ಳಲು ಮುಂದಾದರು. ಆಗ ಬಿಜೆಪಿ-ಜೆಡಿಎಸ್ ಸದಸ್ಯರಿಲ್ಲದ ಹಿನ್ನೆಲೆಯಲ್ಲಿ ಕಲಾಪವನ್ನು ಕೆಲ ಕಾಲ ಮುಂದೂಡಿದರು.ಮತ್ತೆ ಸದನ ಆರಂಭವಾದಾಗಲೂ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಗೈರು ಹಾಜರಾಗಿದ್ದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜಹೊರಟ್ಟಿ, ಕಲಾಪವನ್ನು ಮುಂದೂಡಿದ ಬಳಿಕ ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ಸದಸ್ಯರ ಜತೆ ಚರ್ಚೆ ನಡೆಸಿ ಕಲಾಪಕ್ಕೆ ಹಾಜರಾಗುವಂತೆ ಮನವಿ ಮಾಡಿದೆ. ಪ್ರಮುಖ ವಿಷಯಗಳ ಚರ್ಚೆಯಾಗಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನಕ್ಕೆ ಗೈರು ಹಾಜರಾಗುವುದು ಸರಿಯಲ್ಲ ಎಂಬ ವಿಷಯವನ್ನು ಎರಡೂ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿಕೊಟ್ಟೆ. ಆದರೂ ಅವರು ತಾವು ಸದನಕ್ಕೆ ಬರುವುದಿಲ್ಲ. ನೀವು ಕಲಾಪ ನಡೆಸಿ ಎಂದು ಅನುಮತಿ ನೀಡಿದರು. ಅವರ ಒಪ್ಪಿಗೆ ಮೇಲೆ ಕಲಾಪವನ್ನು ಆರಂಭಿಸಲಾಗಿದೆ ಎಂದರು.ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸರ್ಕಾರಿ ಮುಖ್ಯ ಸಚೇತಕ, ಸಭಾಪತಿಗಳೇ ನೀವು ಅನುಮತಿ ಪಡೆದು ಸದನ ಆರಂಭಿಸಿದ್ದೇವೆ ಎಂಬ ಪದ ಸರಿಯಲ್ಲ. ಸದನದಲ್ಲಿ ನೀವೇ ಸುಪ್ರೀಂ. ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಂದ ಅನುಮತಿ ಪಡೆದಿದ್ದೇವೆ ಎನ್ನುವ ಪದವನ್ನು ಕಡತದಿಂದ ತೆಗೆಸಿರಿ ಎಂದು ಸಲಹೆ ನೀಡಿದರು.ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಧ್ಯ ಪ್ರವೇಶಿಸಿ, ಸುಗಮ ಕಲಾಪ ನಡೆಯಬೇಕು ಎನ್ನುವುದು ಸಭಾಪತಿಗಳಾಗಿ ನಿಮ್ಮ ದೊಡ್ಡತನವನ್ನು ತೋರಿಸುತ್ತದೆ. ಅವರಿಂದ ಅನುಮತಿ ಪಡೆದಿದ್ದೇನೆ ಎಂಬ ಪದ ಬಳಸಿದ್ದು ಸರಿಯಲ್ಲ. ಅದನ್ನು ತೆಗೆದು ಹಾಕಿ ಎಂದು ಮನವಿ ಮಾಡಿದರು.ಅದಕ್ಕೆ ಸಭಾಪತಿ ಬಸವರಾಜಹೊರಟ್ಟಿ ಸಮ್ಮತಿ ನೀಡಿದರು.ಜೆಡಿಎಸ್‌ನ ಸದಸ್ಯ ಮರಿತಿಬ್ಬೇಗೌಡ, ವಿರೋಧ ಪಕ್ಷಗಳು ಸದನಕ್ಕೆ ಗೈರು ಹಾಜರಾಗಿರುವುದು ಸರಿಯಲ್ಲ. ಒಂದು ದಿನದ ಅಧಿವೇಶನ ನಡೆಯುವಾಗ ಸಾರ್ವಜನಿಕರ ತೆರಿಗೆಯ ಹಣ ವ್ಯರ್ಥವಾಗುತ್ತದೆ. ಇದನ್ನು ಮನಗಂಡು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಕಲಾಪಕ್ಕೆ ಹಾಜರಾಗಬೇಕು. ಮುಂಗಡ ಪತ್ರಕ್ಕೆ ಸಂಬಂಧಿಸಿದ ಆರ್ಥಿಕ ವಿಧೇಯಕವನ್ನು ಸರ್ಕಾರ ಅಂಗೀಕಾರ ಮಾಡಬೇಕಾಗಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಾಗಿದೆ. ನಾಡಿನ ಅಭಿವೃದ್ಧಿ ವಿಷಯದಲ್ಲಿ ಸಲಹೆ ಸೂಚನೆ ನೀಡಬೇಕಾಗಿದೆ. ಹೀಗಿರುವಾಗ ವಿರೋಧ ಪಕ್ಷಗಳ ಸದಸ್ಯರು ಜನಹಿತ ಮರೆತು ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಬಳಿಕ ಸಭಾಪತಿಗಳು ವಿಧೇಯಕಗಳ ಮಂಡನೆಗೆ ಅವಕಾಶ ಮಾಡಿಕೊಟ್ಟರು.

ರಾಜ್ಯಪಾಲರನ್ನು ಭೇಟಿ ಮಾಡಿದ ಸಭಾಧ್ಯಕ್ಷ ಖಾದರ್
ವಿರೋಧ ಪಕ್ಷಗಳ ಸಭೆಗೆ ಆಗಮಿಸಿದ್ದ ವಿವಿಧ ರಾಜ್ಯಗಳ ನಾಯಕರುಗಳಿಗೆ ಐಎಎಸ್ ಅಧಿಕಾರಿಗಳಿಂದ ಆತಿಥ್ಯ ನೀಡಿರುವ ವಿಚಾರ ವಿಧಾನಸಭೆಯಲ್ಲಿ ನಿನ್ನೆ ಗದ್ದಲ, ಕೋಲಾಹಲ ಧರಣಿಗೆ ಕಾರಣವಾಗಿ ೧೦ ಬಿಜೆಪಿ ಶಾಸಕರ ಅಮಾನತು ಆದ ಘಟನೆಯ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ರಾಜ್ಯಪಾಲರಿಗೆ ಸಂಪೂರ್ಣ ವರದಿ ನೀಡಿದ್ದಾರೆ.
ಇಂದು ಬೆಳಗ್ಗೆ ೧೦ರ ಸುಮಾರಿಗೆ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರ ಜತೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ವಿಧಾನಸಭೆಯಲ್ಲಿ ನಿನ್ನೆ ನಡೆದ ಘಟನೆ ಬಗ್ಗೆ ಸವಿವರ ಮಾಹಿತಿ ನೀಡಿ, ಘಟನೆ ಬಗ್ಗೆ ಸಪೂರ್ಣ ವಿವರ ಒಳಗೊಂಡ ವರದಿ ನೀಡಿದರು.ನಿನ್ನೆಯ ಸದನದ ಕಲಾಪಗಳು ಯಾವ ರೀತಿಯಲ್ಲಿ ನಡೆದವು, ಏನೇನೂ ಆಯಿತು, ೧೦ ಬಿಜೆಪಿ ಶಾಸಕರ ಅಮಾನತು ಮಾಡಲು ಕಾರಣವಾದ ಅಂಶಗಳು ಎಲ್ಲದರ ಬಗ್ಗೆಯೂ ಸಭಾಧ್ಯಕ್ಷ ಯು.ಟಿ. ಖಾದರ್ ರಾಜ್ಯಪಾಲರಿಗೆ ವಿವರಿಸಿದರು ಎಂದು ಹೇಳಲಾಗಿದೆ.
ಸಭಾಧ್ಯಕ್ಷರ ವರದಿಯನ್ನು ಸ್ವೀಕರಿಸಿದ ರಾಜ್ಯಪಾಲರು, ಸದನವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಿ ಎಂಬ ಸಲಹೆ ನೀಡಿದರು ಎಂದು ಹೇಳಲಾಗಿದೆ.