ವಿಪಕ್ಷಗಳಿಂದ ಜನರಿಗೆ ತಪ್ಪು ಮಾಹಿತಿ;ಸಚಿವ ಶ್ರೀರಾಮುಲು

ಚಿತ್ರದುರ್ಗ,ಜೂ.3: ಬ್ಲಾಕ್ ಫಂಗಸ್ ಖಾಯಿಲೆಗೆ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆಸುವುದಾಗಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.ವೇದಾಂತ ಕೇರ್ಸ್ ಕೋವಿಡ್ ಫಿಲ್ಡ್ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಸ್ತುತ ಕೊರೊನಾ ಮಹಾಮಾರಿ ಜನರ ಜೀವ ಹಾಗೂ ಜೀವನ ಹಾಳು ಮಾಡುತ್ತಿರುವ ಸಂದರ್ಭದಲ್ಲಿ ಬ್ಲಾಕ್ ಫಂಗಸ್ ಕಾಯಿಲೆಯೂ ಕೂಡ ಜನರಲ್ಲಿ ಆವರಿಸುತ್ತಿದೆ. ಇದರ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬಡ ಜನರಿಗೆ ಉಚಿತ ಚಿಕಿತ್ಸೆ ನೀಡ ಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುತ್ತೆನೆ ಎಂದು ತಿಳಿಸಿದರು.ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಬದಲಾವಣೆ ಇಲ್ಲವೇ ಇಲ್ಲ.  ಯಾರೋ ಸಣ್ಣಪುಟ್ಟ ಜನರು ದೆಹಲಿಗೆ ಹೋಗಿ ಮಾತಾಡುತ್ತಾರೆ ಎಂದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ಅಲ್ಲದೆ ಪಕ್ಷದ ಹೈ ಕಮಾಂಡ್ ಎಲ್ಲಾರಿಗೂ ಈಗಾಗಲೇ ಸೂಚನೆಯನ್ನು ನೀಡಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಯಾರೂ ಕೂಡ ಸಿಎಂ ಬದಲಾವಣೆ ವಿಚಾರ ಎತ್ತಬಾರದು ಎಂದಿದೆ ಎಂದು ತಿಳಿಸಿದರು.ಕೋವಿಡ್ ಮಹಾಮಾರಿಯನ್ನು ತಡೆಯಲು ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ಕೈ ಜೋಡಿಸಿ ಕೆಲಸವನ್ನು ಮಾಡುತಿದ್ದು, ಇಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವೇದಾಂತ ಕೇರ್ಸ್ ಕೋವಿಡ್ ಫಿಲ್ಡ್ 100 ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಿ ಇದರಲ್ಲಿ  80 ಆಕ್ಸಿಜನ್ ಹಾಗೂ 20 ವೆಂಟೆಲೇಟರ್ ಹಾಸಿಗೆಗಳನ್ನು ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಅದರಂತೆಯೇ ದಾವಣಗೆರೆ ಸಂಸದರಾದ ಜಿ.ಎಂ.ಸಿದ್ದೇಶ್ವರ್ ಅವರ ಕುಟುಂಬದಿಂದ 60 ಲಕ್ಷ ವೆಚ್ಚದಲ್ಲಿ 333 ಲೀಟರ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿ ಜನರ ಜೀವ ಉಳಿಸುವಂತಹ ಕಾರ್ಯದಲ್ಲಿ ಮುಂದಾಗಿದ್ದಾರೆ.ಆದರೂ ಕೂಡ ಕಾಂಗ್ರೇಸ್ ನ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜನರಿಗೆ ತಪ್ಪು ಮಾಹಿಯನ್ನು ನೀಡುವ ಮೂಲಕ ಕೊರೊನಾ ಹೆಚ್ಚಾಗಲು ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು.ಜನರು ಕಾಂಗ್ರೇಸ್ ನವರ ಮಾತಿಗೆ ಮಣೆ ಹಾಕದೆ ಲಸಿಕೆ ಹಾಕಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಈ ವೇಳೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮ ಶ್ರೀನಿವಾಸ್, ರಘು ಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.