ಬೆಂಗಳೂರು,ಏ.೧೩-ಕನ್ನಡದ ಖ್ಯಾತ ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್‌ಕುಮಾರ್ ಮದುವೆಯಾಗಿದ್ದರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಸದ್ಯ ಈ ವಿಚಾರದ ಬಗ್ಗೆ ಸ್ವತಃ ವಿನೋದ್ ರಾಜ್‌ಕುಮಾರ್ ತಾಯಿ ಲೀಲಾವತಿ ತೆರೆ ಎಳೆದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಪ್ರತಿಕ್ರಿಯಿಸಿರುವ ನಟಿ ಲೀಲಾವತಿ ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸರಳವಾಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿದೆ. ಎಂಥೆಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್‌ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ ನನ್ನ ಮಗನ ಮದುವೆಗೆ ಏಳು ಜನ ಕನ್ನಡಿಗರು ಬಂದಿದ್ದರು. ಏನ್ ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಏಳೇ ಏಳು ಜನ ಬಂದಿದ್ದಾರೆ. ಜನ ಸಿಗಲಿಲ್ಲವಾ ಎಂದು ಕುಹಕವಾಡಿದರು. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’ ಎಂದಿದ್ದಾರೆ.
ಇತ್ತೀಚಿಗೆ ನಿರ್ದೇಶಕ ಮೆಹು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೀಲಾವತಿ ಮತ್ತು ಅವರ ಪುತ್ರನ ಬಗ್ಗೆ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಲ್ಲಿ ‘ವಿನೋದ್ ರಾಜ್ ಅವರಿಗೆ ಮದುವೆಯಾಗಿ ಪುತ್ರನಿದ್ದು, ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿನೋದ್ ಪತ್ನಿ ಮತ್ತು ಮಗ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ’ ಎಂದು ಬರೆದುಕೊಂಡಿದ್ದುರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.