ವಿನೂತನ ರೀತಿಯಿಂದ ಹೋಳಿ ಹಬ್ಬ ಆಚರಿಸಿದ ವಿದ್ಯಾರ್ಥಿಗಳು

ಮುಖಕ್ಕೆ ಬಣ್ಣ ಎರಚಿ ಜೋರಾಗಿ ಕೂಗಾಡಿ ಹಣ ಪೋಲು ಮಾಡಿ ಬೈಕುಗಳಲ್ಲಿ ತಿರುಗಾಡಿ ಕಿರುಚುತ್ತಾ ಹೋಳಿ ಹಬ್ಬವನ್ನು ಆಚರಿಸುವುದು ಬಿಟ್ಟು ತಾವು ಓದಿ ಶಾಲೆಗೆ ಸುಣ್ಣ ಬಣ್ಣ ಹಚ್ಚಿ ಸ್ಚಚತೆಯ ಕಾರ್ಯ ಮತ್ತು ಶಾಲೆಯ ಆವರಣದಲ್ಲಿ ಗಿಡ ನೆಡವುದರ ಮೂಲಕ ಹೋಳಿ ಹಬ್ಬವನ್ನು ವಿನೂತನ ರೀತಿಯಲ್ಲಿ ಜವಾಹರನಗರದ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಆಚರಿಸಿದ್ದಾರೆ. ಈ ಕಾರ್ಯವು ಬೇರೆಯವರಿಗೆ ಮಾದರಿಯಾಗುವ ರೀತಿಯಲ್ಲಿ ಇಡೀ ಶಾಲೆಯನ್ನೆ ಮದುವಣಗಿತ್ತಿಯಂತೆ ಶೃಂಗಾರಿಸಿದ್ದಾರೆ.
ರಾಯಚೂರು ನಗರದಲ್ಲಿರುವ ಜವಾಹರನಗರ ಪ್ರೌಡಶಾಲೆಯು ೧೯೬೯ರಲ್ಲಿ ಸ್ವಾಪನೆಗೊಂಡು ಹಲವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದೆ, ಇದರ ಫಲವಾಗಿಯೇ ಇಂದು ಹಲವರು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ವಿದ್ಯಾರ್ಥಿಗಳಲ್ಲಿ ಒಬ್ಬನಾದ ೧೯೯೮ ರ ಹಳೆಯ ಬ್ಯಾಚಿನ ವಿದ್ಯಾರ್ಥಿ ಬ್ರಿಜಿಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಗರಾವ್‌ದೇಸಾಯಿಕಾಡ್ಲೂರ್ ಇವರು ಬ್ರಿಜಿಲ್ ದೇಶದಲ್ಲಿ ರಾಬರ್ಟ್ ಭಾಷ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಕೊರೋನ ಸಂಕಷ್ಟದಿಂದ ವರ್ಕಫ್ರಾಂ ಹೋಂ ನಿಮಿತ್ಯ ರಾಯಚೂರಿಗೆ ಆಗಮಿಸಿದ ರಂಗರಾವ್ ದೇಸಾಯಿ ತಾನು ಓದಿದ ಶಾಲೆಗೆ ಏನಾದರೂ ಮಾಡಬೇಕೆಂಬ ಬಯಕೆಯಿಂದ ಹೋಳಿ ಹುಣ್ಣಿಮೆಯ ದಿನ ಜನಗಳಿಗೆ ಬಣ್ಣ ಎರಚದೇ ತಾನು ಓದಿದ ಶಾಲೆಗೆ ಸುಣ್ಣ ಬಣ್ಣವನ್ನು ಮಾಡಿ ಮತ್ತು ಮೈದಾನದಲ್ಲಿ ಗಿಡಗಳನ್ನು ನೆಡುವ ಕಾರ್ಯಚಟುವಟಿಕೆಗೆ ತನ್ನ ಎಲ್ಲ ಗೆಳೆಯರನ್ನು ಒಟ್ಟುಗೂಡಿಸಿ ಹಾಗೂ ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳನ್ನು ಜೊತೆಗೂಡಿಸಿ ವಿನೂತನವಾಗಿ ಹೋಳಿ ಹಬ್ಬ ಆಚರಿಸಿದ್ದು ಇಂದು ಎಲ್ಲರ ಗಮನ ಸೆಳೆದಿದೆ.
ಗೋಡೆಗೆ ರಾಷ್ಟ್ರನಾಯಕರ ಚಿತ್ರ :
ಕಳೆದ ೨೦ ವರ್ಷಗಳಿಂದ ಸುಣ್ಣ ಬಣ್ಣ ಕಾಣದ ಶಾಲೆಯ ಈ ಕಟ್ಟಡ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಸುಣ್ಣ ಬಣ್ಣವನ್ನು ಕಂಡಿರುತ್ತದೆ. ೧೯೯೮ ರ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಬಣ್ಣ ಹಂಚಿ ಸಂಭ್ರಮಿಸಿದ್ದಾರೆ.
ಹಸಿರು ಗಿಡಗಳನ್ನು ನೆಟ್ಟಿದ್ದಾರೆ. ಶ್ರಮದಾನದ ಮೂಲಕ ಶಾಲೆಯ ಮೈದಾನವನ್ನು ಸ್ವಚ್ಛಗೊಳಿಸಿದ್ದಾರೆ.
ಸುಣ್ಣ ಬಣ್ಣದ ನಂತರ ಶಾಲೆಯ ಕಟ್ಟಡಕ್ಕೆ ಹೊಸ ಕಳೆ ಬಂದಿದೆ. ಸುಮಾರು ೩೫ ರೂಂಗಳಿರುವ ಈ ಕಟ್ಟಡ ನೀಲಿ ಆಕಾಶ ಬಣ್ಣದಿಂದ ಮತ್ತು ಹಸಿರು ಬಣ್ಣದಿಂದ ವಿದ್ಯಾರ್ಥಿಗಳಿಂದ ಶೃಂಗಾರಿಸಲ್ಪಟ್ಟಿದೆ.
ಪ್ರತಿ ವರ್ಗ ಕೋಣೆಯ ಮುಂದೆ ಮಹಾತ್ಮಗಾಂಧಿಜಿ, ಡಾ|| ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ, ಕಿತ್ತೂರು ರಾಣಿ ಚನ್ನಮ್ಮ, ಡಾ|| ರಾಧಾಕೃಷ್ಣನ್, ಸರ್ದಾರ್ ವಲ್ಲಭಬಾಯಿ ಪಟೇಲ್ ಇವರ ಭಾವಚಿತ್ರಗಳು ಗೋಡೆಯ ಮೇಲೆ ಸುಂದರವಾಗಿ ಆಕರ್ಷಕವಾಗಿ ಎದ್ದು ಕಾಣಿಸುತ್ತಿವೆ.
ಇದರ ಜೊತೆಗೆ ಶೈಕ್ಷಣಿಕ ಸಾಲುಗಳಿರುವ ಗೋಡೆಯ ಬರಹಗಳು ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಕಂಗೊಳಿಸುತ್ತಿವೆ.
ಶಾಲೆಯ ಮೈದಾನ ಮತ್ತು ಹಿಂದುಗಡೆ ಇರುವ ಎಲ್ಲಾ ಕಸವನ್ನು ಹಳೆಯ ವಿದ್ಯಾರ್ಥಿಗಳು ತೆಗೆದುಹಾಕಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. ಸುಮಾರು ೬೦ ಕ್ಕೂ ಹೆಚ್ಚು ವಿವಿಧ ತಳಿಯ ಗಿಡಗಳನ್ನು ನೆಟ್ಟು ನೀರುಣಿಸಿದ್ದಾರೆ.
ಈ ಶ್ರಮದಾನ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಜೊತೆಗೆ ಉತ್ಸುಕದಿಂದ ರಾಯಚೂರು ಜಿಲ್ಲಾ ಶಿಕ್ಷಣಾಧಿಕಾರಿ ಹೆಚ್.ಸುಖದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ ಸಂಘದ ಕಾರ್ಯದರ್ಶಿ ಜೆ.ಎಂ.ವಿರೇಶ್, ಪ್ರಾಚಾರ್ಯ ಪ್ರಕಾಶ ಕುಲಕರ್ಣಿ ಈ ಭಾಗದ ನಗರಸಭೆ ಸದಸ್ಯ ಶಶಿರಾಜ್ ಮತ್ತು ಶಾಲೆಯ ಮುಖ್ಯ ಗುರುಗಳಾದ ಮುರಳಿಧರ ಕುಲಕರ್ಣಿಯವರು ಲವಲವಿಕೆಯಿಂದ ಭಾಗವಹಿಸಿ ವಿದ್ಯಾರ್ಥಿಗಳ ಈ ಉತ್ತಮ ಮಾದರಿ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು. ಈ ವಿದ್ಯಾರ್ಥಿಗಳಿಗೆ ಈ ಒಂದು ಉತ್ತಮ ಕಾರ್ಯ ಮಾಡಲು ಮುರಳಿಧರ ಕುಲಕರ್ಣಿಯವರ ಪ್ರೋತ್ಸಾಹವೇ ಮುಖ್ಯ ಕಾರಣವಾಗಿದೆ.
ಈ ಸಂದರ್ಭದಲ್ಲಿ ಸಸಿ ನೆಟ್ಟು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ್ ದೊಡ್ಡಮನಿಯವರು ಮಾತನಾಡಿ ಇದೊಂದು ವಿನೂತನ ಪ್ರಯತ್ನವಾಗಿದೆ. ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ನಮ್ಮ ಶಾಲೆಯೆಂಬ ಮನೋಭಾವದಿಂದ ಜವಾಹರನಗರ ಶಾಲೆಗೆ ಸುಣ್ಣ ಬಣ್ಣ ಮತ್ತು ಶ್ರಮದಾನ ಮಾಡುತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಹೆಚ್.ಸುಖದೇವ್ ಮಾತನಾಡಿ ರಂಗರಾವ್‌ದೇಸಾಯಿ ಕಾಡ್ಲೂರು ವಿದ್ಯಾರ್ಥಿಯು ಬ್ರಿಜಿನಲ್‌ಲ್ಲಿದ್ದು ಕರೊನಾ ಸಂಕಟದಿಂದ ರಾಯಚೂರಿಗೆ ಬಂದ ಸಂದರ್ಭದಲ್ಲಿ ತಾನು ಓದಿದ ಶಾಲೆಯ ಬಗ್ಗೆ ಹೊಸತನದ ವಿಶಿಷ್ಟ ಕಾರ್ಯ ಕೈಗೊಂಡಿರುವುದು ಶ್ಲಾಘನೀಯವಾಗಿದೆ.
ಹೋಳಿ ಹಬ್ಬವನ್ನು ಮುಖಕ್ಕೆ ಬಣ್ಣ ಎರಚುವುದಕ್ಕಿಂತ ಶಾಲೆಗೆ ಬಣ್ಣ ಹಚ್ಚೋಣ ಎನ್ನುವ ಶಾಲೆಯ ಹಳೆಯ ವಿದ್ಯಾರ್ಥಿಗಳ ಹೊಸ ಚಿಂತನೆ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಜೆ.ಎಂ.ವಿರೇಶರವರು ಶಾಲೆಯ ಹಳೆಯ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.
ನಗರಸಭೆ ಸದಸ್ಯರಾದ ಈ ಶಶಿರಾಜ್ ಮಾತನಾಡಿ ನಾನು ಸಹ ಈ ಶಾಲೆಯ ಹಳೆಯ ವಿದ್ಯಾರ್ಥಿ ಇದರ ಅಭಿವೃದ್ಧಿಗೆ ನಾನು ತುಂಬಾ ಸಹಕಾರ ನೀಡುತ್ತೇನೆಂದು ಮುಂಬರುವ ದಿನಗಳಲ್ಲಿ ಈ ಶಾಲೆಯನ್ನು ಮಾದರಿಯ ಶಾಲೆಯನ್ನಾಗಿ ಮಾಡೋಣವೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಮುರಳಿಧರ ಕುಲಕರ್ಣಿ ಮಾತನಾಡಿ ಪ್ರಸ್ತುತ ಹಳೆಯ ವಿದ್ಯಾರ್ಥಿಗಳು ಕೈಗೊಂಡ ಕಾರ್ಯ ಇನ್ನೊಬ್ಬರಿಗೆ ಮಾದರಿಯಾಗಿದೆ. ಇಡೀ ಕಟ್ಟಡವನ್ನು ಕಂಗೊಳಿಸುವಂತೆ ಮಾಡಿದ್ದು ಶ್ಲಾಘನೀಯ.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಗ್ರೀನ್ ರಾಯಚೂರು ಗೌರವ ಅಧ್ಯಕ್ಷರಾದ ಕೊಂಡ ಕೃಷ್ಣಮೂರ್ತಿ ಉಪಸ್ಥಿತರಿದ್ದರು, ಮತ್ತು ಗ್ರೀನ್ ರಾಯಚೂರಿನ ರಾಜೇಂದ್ರ, ಸರಸ್ವತಿ ಕಿಲಕಿಲೆಯವರು ಇದ್ದರು.
ಈ ಸಂದರ್ಭದಲ್ಲಿ ರಂಗರಾವ್ ದೇಸಾಯಿಯವರಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಲೆಯ ಪ್ರಾಚಾರ್ಯರಾದ ಪ್ರಕಾಶ ಕುಲಕರ್ಣಿ ಎಲ್ಲರನ್ನು ಸ್ವಾಗತಿಸಿದರು. ಶಾಲೆಯ ಮುಖ್ಯ ಗುರು ಮುರಳಿಧರ ಕುಲಕರ್ಣಿ ನಿರೂಪಿಸಿ ವಂದಿಸಿದರು.
ಈ ಶ್ರಮದಾನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರವಿಕುಮಾರ್, ಟಿ. ರೆಡ್ಡಿ, ಪವನಕುಮಾರ, ನರಸಪ್ಪ ಭಂಡಾರಿ, ರವೀಂದ್ರ ಕುಲಕರ್ಣಿ ಹಳೆಯ ವಿದ್ಯಾರ್ಥಿಗಳಾದ ರಾಘವೇಂದ್ರ, ಕಾಂತನವರು, ಪ್ರಸನ್ನ ಆಲಂಪಲ್ಲಿ, ಪೋಲಿಸ್ ನರಸಪ್ಪ ಮತ್ತು ಹಳೆಯ ವಿದ್ಯಾರ್ಥಿಗಳು ಹಾಜರಾಗಿದ್ದರು.
ಮುರಳಿಧರ ಕುಲಕರ್ಣಿ
ರಾಯಚೂರು
ಮೊ:೯೪೪೮೫೭೦೨೨೫