ವಿನಾಕಾರಣ ತೇಜೋವಧೆ ಸೋಮಣ್ಣ ಭಾವುಕ

ಬೆಂಗಳೂರು,ಮಾ.೧೪:ನಾನು ಪ್ರಾಮಾಣಿಕ ವ್ಯಕ್ತಿ ಬಿಜೆಪಿ ಬಿಡುವುದಿಲ್ಲ. ನನ್ನ ತೇಜೋವಧೆಯನ್ನು ಕೆಲವರು ನಡೆಸಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಭಾವುಕರಾಗಿ ಗದ್ಗದಿತರಾದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಸಚಿವ ಸೋಮಣ್ಣ ಅವರು ತಾವು ಕಾಂಗ್ರೆಸ್‌ಗೆ ಸೇರುತ್ತೇನೆ ಎಂಬ ವರದಿಗಳ ಬಗ್ಗೆ ಬೇಸರ ಹೊರ ಹಾಕಿ ನಾನು ಪ್ರಾಮಾಣಿಕ. ಬಿಜೆಪಿ ಬಿಡುವುದಿಲ್ಲ. ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡುತ್ತೇನೆ ಎಂದರು.
ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಹೇಳುವಾಗ ಅವರ ಕಣ್ಣಾಲಿಗಳು ತುಂಬಿದ್ದವು.
ನಾನು ಯಾರ ಮುಲಾಜಿಗೂ ಒಳಗಾಗಿಲ್ಲ. ಪ್ರಾಮಾಣಿಕವಾಗಿ ಜನ ಸೇವೆ ಮಾಡಿದ್ದೇನೆ.ಬೆಂಗಳೂರಿಗೆ ನಾನು ಹೊಟ್ಟೆಪಾಡಿಗೆಬಂದೆ ೬ಇಂಟು೮ ಅಡಿ ಜಾಗದಲ್ಲಿ ವಾಸಮಾಡಿದವನು. ಸುಳ್ಳು ಹೇಳಲು ನನಗೆ ಬರುವುದಿಲ್ಲ. ಶಿವಕುಮಾರ್ ಸ್ವಾಮೀಜಿ ನನಗೆ ಆದರ್ಶ.ನನ್ನ ತಾಯಿ ನನಗೆ ಆದರ್ಶ ಕಲಿಸಿದ್ದಾರೆ. ಸಂಜೆ ಕಾಲೇಜಿಗೂ ಹೋಗುತ್ತಿದ್ದೆ ಎಂದು ಕಣ್ಣೀರಿಟ್ಟರು.
ರಾಜಕಾರಣದಲ್ಲಿ ಮೊದಲು ನಾನು ಕಾರ್ಪರೇಟ್ ಆಗಿ ನಾನು ಆಯ್ಕೆಯಾದೆ. ೧೯೯೪ರಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮತಗಳಿಂದ ಗೆದ್ದೆ. ಮೂರು ಮರ್ಡರ್ ಆದಾಗ ನನ್ನ ಮೇಲೆ ಅಬ್ದುಲ್ ಅಜೀಂ ನನ್ನ ಮೇಲೆ ಆರೋಪ ಮಾಡಿದ್ದರು. ದೇವೇಗೌಡರು ನನ್ನನ್ನು ರಾಜಕೀಯವಾಗಿ ಕೈ ಹಿಡಿದಿದ್ದರು. ಕಾಂಗ್ರೆಸ್‌ನಿಂದ ೨ ಬಾರಿ ಗೆದ್ದೆ. ಆಮೇಲೆ ಸೋತೆ. ಸೋತವನ್ನು ಎಂಎಲ್‌ಸಿ ಮಾಡಿ ಸಚಿವರನ್ನಾಗಿ ಮಾಡಿದರು.
ನಾನು ನೇರವಾಗಿ ಮಾತನಾಡುತ್ತೇನೆ ಅದು ಕೆಲವರಿಗೆ ಇಷ್ಟ ಆಗಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಚಿತಾವಣೆ ಮಾಡುವ ಕೆಲಸ ಮಾಡಿಲ್ಲ. ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಅದೇ ನನ್ನ ತಾಯಿ ಎಂಬಂತೆ ನೋಡುತ್ತೇನೆ. ನಾನು ಬಿಜೆಪಿ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅದರೂ ತೇಜೋವಧೆ ನಡೆದಿದೆ ಎಂದರು.
ನಾನು ಪಕ್ಷ ಬಿಟ್ಟು ಹೋಗುವ ಪ್ರಮೇಯವೇ ಇಲ್ಲ. ನಾನು ಬಿಜೆಪಿಯಲ್ಲೇ ಇರುತ್ತೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಲ್ಲ. ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ, ನಡ್ಡಾ ಜೀ ನಮ್ಮ ನಾಯಕರು. ಬಿಜೆಪಿಯಲ್ಲೇ ಮುಂದುವರೆಯುತ್ತೇನೆ. ಬೇರೆ ಪಕ್ಷ ಸೇರುತ್ತೇನೆ ಎಂಬುದಕ್ಕೆ ಇತಿಶ್ರೀ ಹಾಡೋಣ ಎಂದರು.