ವಿನಯ ಕುಲಕರ್ಣಿ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ : ಮಲಕಾರಿ ವಿಶ್ವಾಸ

ಧಾರವಾಡ ನ 7 : ಮಾಜಿ ಸಚಿವರು ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡರಾದ ವಿನಯ ಕುಲಕರ್ಣಿ ಅವರು ಶೀಘ್ರ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ ಎಂದು ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವ ವಿನಯ ಕುಲಕರ್ಣಿಯವರ ಪ್ರಭಾವಕ್ಕೆ ಬೆಚ್ಚಿಬಿದ್ದಿರುವ ಕಾಣದ ಕೈಗಳ ಕುತಂತ್ರದಿಂದ ಕೊಲೆ ಪ್ರಕರಣದಲ್ಲಿ ವಿನಾಕಾರಣ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಶೀಘ್ರದಲ್ಲಿ ಆರೋಪ ಮುಕ್ತರಾಗಿ ಹೊರಬರಲಿದ್ದು ಅವರ ವಿರುದ್ಧ ನಡೆಸುತ್ತಿರುವ ರಾಜಕೀಯ ಷಡ್ಯಂತ್ರ ಫಲಿಸುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ಕಾನೂನಿನ ಅಡಿಯಲ್ಲಿ ಅತ್ಯಂತ ಶಿಸ್ತಿನಿಂದ ಕೆಲಸಮಾಡಬೇಕು, ಯಾರ ಮುಲಾಜಿಗೆ ಒಳಗಾಗದೆ ಕಾರ್ಯ ನಿರ್ವಹಿಸಿದರೆ ಒಳ್ಳೆಯದು. ಯಾವ ಒತ್ತಡಕ್ಕೆ ಮನೆಯದೆ ಪಾರದರ್ಶಕ ತನಿಖೆ ಮಾಡಲಿ ಎಂದು ನಮ್ಮ ಹೆಬ್ಬಯಕೆ ಆಗಿದೆ ಎಂದಿದ್ದಾರೆ.
ವಿನಯ ಕುಲಕರ್ಣಿ ಅವರು ಶೀಘ್ರವೇ ಆರೋಪ ಮುಕ್ತರಾಗಿ ಫಿನಿಕ್ಸ್ ಪಕ್ಷಿಯಂತೆ ಮತ್ತೆ ಪುಟಿದೆದ್ದು ಬರಲಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ತಮ್ಮ ಛಾಪು ಮೂಡಿಸಲಿದ್ದಾರೆ.ಆದಕಾರಣ ಕಾರ್ಯಕರ್ತರು ಯಾರೂ ಕೂಡ ಆತಂಕಕ್ಕೊಳಗಾಗಬಾರದೆಂದು ಮಲಕಾರಿ ಕೋರಿದ್ದಾರೆ.