ವಿನಯ ಕುಲಕರ್ಣಿ ಅವರನ್ನು ವಶಕ್ಕೆ ಪಡೆದಿರುವುದು ರಾಜಕೀಯ ದುರುದ್ದೇಶ: ಬುಡ್ಡನಗೌಡ್ರ ಆರೋಪ


ಬ್ಯಾಡಗಿ, ನ 7- ಧಾರವಾಡದ ಜಿ.ಪಂ ಸದಸ್ಯರಾಗಿದ್ದ ಯೋಗೇಶಗೌಡ ಅವರ ಹತ್ಯೆಯ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವುದು ರಾಜಕೀಯ ದುರುದ್ದೇಶವೆಂದು ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಎಚ್. ಬುಡ್ಡನಗೌಡ್ರ ಆರೋಪಿಸಿದ್ದಾರೆ.
ಶುಕ್ರವಾರ ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆ ಹಂತದಲ್ಲಿ ಇರುವ ಪ್ರಕರಣವನ್ನು ಅದರ ತೀರ್ಪು ಹೊರ ಬರುವ ಮುನ್ನವೇ ರಾಜಕೀಯ ದುರುದ್ದೇಶದಿಂದ ಕೆದಕಲಾಗಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಸೇಡಿನ ರಾಜಕಾರಣ ಮಾಡುತ್ತಿರುವ ಬಿಜೆಪಿ ಹಲವಾರು ಬಾರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದರು.
ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಕರಲಿಂಗಪ್ಪನವರ ಮಾತನಾಡಿ, ಕುತಂತ್ರಗಳ ಮೂಲಕ ರಾಜಕೀಯ ಮಾಡುತ್ತಿರುವ ಬಿಜೆಪಿಯ ಒತ್ತಡಕ್ಕೆ ಸಿಬಿಐ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕುಗ್ಗದೇ ಕಾನೂನಾತ್ಮಕವಾಗಿ ವಿಚಾರಣೆ ನಡೆಸಲಿ. ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರು ವಿನಯ ಕುಲಕರ್ಣಿ ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿರುವುದು ಖಂಡನೀಯವಾಗಿದ್ದು, ಸಿಬಿಐ ಅಧಿಕಾರಿಗಳು ರಾಜಕೀಯ ಅಸ್ತ್ರವಾಗದೇ ನ್ಯಾಯಯುತವಾಗಿ ಕ್ರಮ ವಹಿಸಿ ಅವರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ, ಮುಖಂಡರಾದ ಬೀರಪ್ಪ ಬಣಕಾರ, ರುದ್ರಪ್ಪ ಹೊಂಕಣದ ಉಪಸ್ಥಿತರಿದ್ದರು.