ವಿನಯ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಧಾರವಾಡ, ಡಿ 21: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್‍ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿಯನ್ನು ಧಾರವಾಡ 3ನೇ ಹೆಚ್ಚುವರಿ ನ್ಯಾಯಾಲಯ ಮತ್ತೆ ಒಂದು ವಾರ ಕಾಲ ವಿಸ್ತರಿಸಿ ಆದೇಶಿಸಿದೆ.
ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವಿನಯ್ ನ್ಯಾಯಾಂಗ ಬಂಧನದ ಅವಧಿಯು ಇಂದು ಮುಕ್ತಾಯವಾಗಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ ಸಿ.ಎಮ್. ಒಂದು ವಾರ ಕಾಲ ಅಂದರೆ ಡಿಸೆಂಬರ್ 28ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದ್ದಾರೆ.
ಯೋಗೀಶ್‍ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಮಾವ ಚಂದ್ರಶೇಖರ್ ಇಂಡಿ ಅವರನ್ನು ಸಹ ಸಿಬಿಐ ಅಧಿಕಾರಿಗಳು ಹಲವು ಬಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇವರು ಸಹ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಇವರ ಅವಧಿಯೂ ಡಿ. 28ರಂದೇ ಮುಗಿಯಲಿದೆ.
ಯೋಗೀಶ್ ಹತ್ಯೆ ಪ್ರಕರಣದಡಿ ವಿಚಾರಣೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ದಿ. 5-11-2020ರಂದು ವಶಕ್ಕೆ ಪಡೆದಿದ್ದರು. 3ದಿನಗಳ ಕಾಲ ಸಿಬಿಐ ವಿಚಾರಣೆಯ ನಂತರ ನ್ಯಾಯಾಲಯ ವಿನಯ್‍ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.
ನವೆಂಬರ್ 23 ರಂದು ನ್ಯಾಯಾಂಗ ಬಂಧನ ಅವಧಿ ಕೊನೆಕೊಂಡ ನಂತರ ಮತ್ತೆ 14 ದಿನಗಳ ಕಾಲ ಅಂದರೆ ಡಿ. 7ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಡಿ.7 ರಂದು ಮತ್ತೆ ವಿಚಾರಣೆ ನಡೆಸಿ 14 ದಿನಗಳ ಕಾಲ ಅಂದರೆ ಡಿ. 21ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿತ್ತು. ಈ ಅವಧಿ ಇಂದು ಮುಕ್ತಾಯಗೊಂಡಿದ್ದು, ಇಂದು ಮತ್ತೆ ನ್ಯಾಯಾಧೀಶರು 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ನವೆಂಬರ್ 9ರಿಂದ ವಿನಯ್ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾರೆ.
ಈ ಮಧ್ಯೆ ವಿನಯ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಾಗಿ, ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿತ್ತು. ತದನಂತರ ವಿನಯ್ ಪರ ವಕೀಲರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಂಗ ಬಂಧನದ ಮಧ್ಯೆ ವಿನಯ್‍ಗೆ ಜಾಮೀನು ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಕಾಯ್ದು ನೋಡಬೇಕಿದೆ.