ವಿನಯ್ ಕುಲಕರ್ಣಿ ಅವರಿಂದ ಉಂಡುವಾಡಿ ನೀರಾವರಿ ಯೋಜನೆ ಪರಿಶೀಲನೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.12:- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್ ಕುಲಕರ್ಣಿ ಅವರು ಭಾನುವಾರ ಮೈಸೂರಿನ ಉಂಡುವಾಡಿ ನೀರಾವರಿ ಯೋಜನೆಯ ಪರಿಶೀಲನೆ ನಡೆಸಿದರು.
ಮಂಡಳಿ ವತಿಯಂದ ಅನುಷ್ಠಾನಗೊಳಿಸುತ್ತಿರುವ ಪ್ರತಿಷ್ಠಿತ ಯೋಜನೆಯಾದ ಹಳೇಉಂಡವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಮೈಸೂರು ನಗರ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಮತ್ತು ವ್ಯಾಪ್ತಿಯ ಹೊರಗೆ ಬರುವ ಗ್ರಾಮಗಳಿಗೆ ಕುಡಿಯುವ ಸಗಟು ನೀರು ಸರಬರಾಜು ಯೋಜನೆಯ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು.
ಹಳೇಉಂಡವಾಡಿ ಸಮೀಪ ನಿರ್ಮಿಸುತಿರುವ ಮೂಲಸ್ಥಾವರ, ಮೇಗಳಾಪುರ ಸಮೀಪ ನಿರ್ಮಿಸುತ್ತಿರುವ 150ಒಐಆ, ಜಲಶುಧ್ಧೀಕರಣ ಘಟಕ ಮತ್ತು ಕೊಳವೆ ಮಾರ್ಗ ಕಾಮಗಾರಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿದರು.
ಪರಿವೀಕ್ಷಣೆ ಸಂದರ್ಭ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳೊಡನೆ ವಿವರವಾಗಿ ಚರ್ಚಿಸಿದರು. ಪ್ರಗತಿಯಲ್ಲಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು ಯೋಜನೆ ಚಾಲನೆಗೊಳಿಸಲು ಅಗತ್ಯವಿರುವ 66 ಕೆ.ವಿ. ನಿರಂತರ ವಿದ್ಯುತ್ ಸರಬರಾಜು ಮಾರ್ಗ ಅಳವಡಿಸಲು ಇಲಾಖೆ ವತಿಯಂದ ಈಗಾಗಲೇ ಟೆಂಡರ್ ಕರೆಯಲಾಗಿದೆ. ಯೋಜನೆಯನ್ನು ಮುಂದಿನ ಒಂದು ವರ್ಷದ ಅವಧಿಯೊಳಗೆ ಎಲ್ಲಾ ರೀತಿಯಲ್ಲೂ ಪೂರ್ಣಗೊಳಿಸಿ ಯೋಜನೆಯ ಫಲಾನುಭವಿಗಳಾದ ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ ವ್ಯಾಪ್ತಿಯ ಸಾರ್ವಜನಿಕ ಉಪಯೋಗಕ್ಕೆ ನೀಡುವುದಾಗಿ ತಿಳಿಸಿದರು.