ವಿನಯ್‍ಗೆ 14ದಿನ ನ್ಯಾಯಾಂಗ ಬಂಧನ

ಹುಬ್ಬಳ್ಳಿ, ನ 11: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‍ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಧಾರವಾಡ 3ನೇ ಜೆಎಮ್‍ಎಫ್‍ಸಿ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಇಂದು ಆದೇಶಿಸಿದೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್‍ಗೌಡ ಕೊಲೆ ಪ್ರಕರಣದ ವಿಚಾರಣೆಗಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಪಡೆದಿದ್ದರು. ಇಂದು ಸಿಬಿಐ ಕಸ್ಟಡಿಗೆ ಪಡೆದ ದಿನಾಂಕ ಅಂತ್ಯವಾಗಿದ್ದು, ಅವರನ್ನು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತು. ಆದರೆ ಧಾರವಾಡ ನ್ಯಾಯಾಲಯದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿನಯ್ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ವಿನಯ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಯೋಗೀಶ್‍ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ವಿನಯ್ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಪಡೆದು ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ತೀವ್ರ ವಿಚಾರಾಣೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಬೇಕಾಗಿತ್ತು. ಆದರೆ ಹುಬ್ಬಳ್ಳಿಯ ಸಿಎಆರ್ ಮೈದಾನದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿನಯ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ವಿನಯ್ ಅವರು ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.
ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಹಲವರನ್ನು ವಿಚಾರಣೆ ಮಾಡಿರುವ ಸಿಬಿಐ ಅಧಿಕಾರಿಗಳು ಮಹತ್ವದ ವಿಷಯಗಳನ್ನು ಸಂಗ್ರಹಿಸಿದ್ದಾರೆ.
ಮೂರು ದಿನಗಳ ತನಿಖೆಯಲ್ಲಿ ವಿನಯ್ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಶೇಖರ ನ್ಯಾಮಗೌಡ, ಜಿ.ಪಂ. ಎಇಇ ಎಸ್.ಎನ್ ಗೌಡರ, ಸೋಮಶೇಖರ ನ್ಯಾಮಗೌಡ, ಕಾರು ಚಾಲಕನಾಗಿದ್ದ ಪುಂಡಲೀಕ ಮೊರಬ, ವಿನಯ ಸೋದರ ಮಾವ ಚಂದ್ರಶೇಖರ ಇಂಡಿ (ವಿಜಯಪುರ), ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಯೋಗೇಶಗೌಡರ ಪತ್ನಿ ಮಲ್ಲಮ್ಮ ಗೌಡರ ಸೇರಿದಂತೆ ಮತ್ತಿತರರನ್ನು ಕರೆತಂದು ಸಿಬಿಐ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.
ಜಿಲ್ಲಾ ಪಂಚಾಯತಿಯ ಎಇಇ ಆಗಿರುವ ಎಸ್.ಎಸ್.ಗೌಡರ ಅವರನ್ನು ಸಿಬಿಐ ತಂಡ ನಿನ್ನೆ ಬೆಳಿಗ್ಗೆ ಕರೆತಂದು ವಿಚಾರಣೆ ಮಾಡಿದ್ದಾರೆ. 2016 ರಲ್ಲಿ ಜಿ.ಪಂ.ಚುನಾವಣೆ ನಡೆದ ಸಂದರ್ಭದಲ್ಲಿ ಹೆಬ್ಬಳ್ಳಿ ಕ್ಷೇತ್ರದಿಂದ ಯೋಗೇಶಗೌಡ ಗೆದ್ದಿದ್ದರು. ಈ ಸಂದರ್ಭದಲ್ಲಿ ಪ್ಲೈಯಿಂಗ್ ಸ್ಕ್ವಾಡ್ ಆಗಿದ್ದ ಎಸ್.ಎನ್.ಗೌಡರ ಅವರು ಯೋಗೇಶಗೌಡ ಅವರ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ದಾಖಲಿಸಲು ವಿನಯ ಒತ್ತಡ ಹೇರಿದ್ದರು ಎನ್ನಲಾಗಿದ್ದು ಈ ಸಂಬಂಧ ಎಸ್.ಎನ್.ಗೌಡರ ಅವರನ್ನು ಸಿಬಿಐ ಅಧಿಕಾರಿಗಳು ತನಿಖೆ ಮಾಡಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ 3 ದಿನಗಳಿಂದ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಸದ್ಯ ಧಾರವಾಡ 3ನೇ ಜೆಎಂಎಫ್‍ಸಿ ನ್ಯಾಯಾಲಯ ವಿನಯ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.