ವಿಧ್ವಂಸಕ ಕೃತ್ಯ ಬೆದರಿಕೆ

ಎಲ್ಲೆಡೆ ಕಟ್ಟೆಚ್ಚರ
ಬೆಂಗಳೂರು,ನ.೨೪- ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಿ ಪ್ರಕರಣ ತನಿಖೆ ಬಿರುಸುಗೊಂಡಿರುವ ಬೆನ್ನಲ್ಲೇ ಶಂಕಿತ ಉಗ್ರ ಶಾರೀಕ್‌ನ ಬೆಂಬಲಕ್ಕೆ ನಿಂತಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸುವುದಾಗಿ ಬೆದರಿಕೆ ಹಾಕಿದೆ.ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಶಂಕಿತ ಉಗ್ರ ಶಾರೀಕ್ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು.ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ.ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.‘ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನಿಸಿದ. ಈ ಕಾರ್ಯಾಚರಣೆಯಲ್ಲಿ ಅದು ಯಶಸ್ವಿಯಾಗಲಿಲ್ಲ. ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ನಮ್ಮ ಇತರ ಸೋದರರನ್ನು ಬಂಧಿಸಲು ಯತ್ನಿಸುತ್ತಿವೆ, ಹಿಂಬಾಲಿಸುತ್ತಿವೆ. ಆದರೆ ಅವರಿಂದ ತಪ್ಪಿಸಿಕೊಳ್ಳಲು ನಾವು ಸಫಲರಾಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು’ ಎಂದು ಬೆದರಿಕೆ ಹಾಕಿದ್ದಾರೆ.
ಹೇಳಿಕೆಯ ವಿವರ:
ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಿನ ಒಂದು ಹಾಳೆಯ ಮಾಧ್ಯಮ ಹೇಳಿಕೆಯು ಇಂಗ್ಲಿಷ್‌ನಲ್ಲಿದ್ದು, ಕರಪತ್ರದ ವಿನ್ಯಾಸವನ್ನು ಹೋಲುತ್ತದೆ. ಅದರ ಮೇಲೆ ೨೩ ನವೆಂಬರ್, ೨೦೨೨ ಎಂಬ ದಿನಾಂಕದ ಉಲ್ಲೇಖವಿದೆ.
‘ಅಲ್ಲಾಹನು ಹೇಳುತ್ತಾನೆ: ಯಾರ ವಿರುದ್ಧ ಅಕ್ರಮವಾಗಿ ಯುದ್ಧ ಮಾಡಲಾಗುತ್ತಿದೆಯೋ ಅವರಿಗೆ ಹೋರಾಡಲು ಅನುಮತಿ ನೀಡಲಾಗಿದೆ, ಏಕೆಂದರೆ ಅವರು ಅನ್ಯಾಯಕ್ಕೊಳಗಾದರು (ಅಲ್-ಕುರಾನ್)’ ಎಂಬ ಸಾಲುಗಳು ಮೊದಲ ಪ್ಯಾರಾದಲ್ಲಿದ್ದು, ಅದನ್ನು ಬೋಲ್ಡ್ ಮಾಡಲಾಗಿದೆ.ನಂತರದ ಸಾಲುಗಳಲ್ಲಿ ನಾವು, ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್ ಸಿ) ಸಂದೇಶವನ್ನು ರವಾನಿಸಲು ಬಯಸುತ್ತೇವೆ: ನಮ್ಮ ಮುಜಾಹಿದ್ ಸಹೋದರ ಮೊಹಮ್ಮದ್ ಶಾರಿಕ್ ಕೇಸರಿ ಭಯೋತ್ಪಾದಕರ ಭದ್ರಕೋಟೆಯಾದ ಮಂಗಳೂರಿನ ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದನು. ಈ ಕಾರ್ಯಾಚರಣೆಯು ಅದರ ಉದ್ದೇಶಗಳನ್ನು ಪೂರೈಸದಿದ್ದರೂ, ರಾಜ್ಯ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಗಳು ಅನುಸರಿಸುತ್ತಿದ್ದರೂ, ಯಶಸ್ವಿಯಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೂ ಸಹ, ನಾವು ಅದನ್ನು ತಾಂತ್ರಿಕ ದೃಷ್ಟಿಕೋನದಿಂದ ಯಶಸ್ವಿ ಎಂದು ಪರಿಗಣಿಸುತ್ತೇವೆ. ಅವರು ದಾಳಿಯನ್ನು ಸಿದ್ಧಪಡಿಸಿದರು ಮತ್ತು ಅನುಷ್ಠಾನಕ್ಕೆ ತಂದರು.
ಎಡಿಜಿಪಿಗೆ ಎಚ್ಚರಿಕೆ:
’ಸಹೋದರನ ಬಂಧನಕ್ಕೆ ಕಾರಣವಾದ ಅಕಾಲಿಕ ಸ್ಫೋಟಕ್ಕೆ ಸಂಬಂಧಿಸಿದಂತೆ, ಇದು ಎಲ್ಲಾ ಮಿಲಿಟರಿ ಮತ್ತು ವಿಧ್ವಂಸಕ ಕಾರ್ಯಾಚರಣೆಗಳೊಂದಿಗೆ ಯಾವಾಗಲೂ ಇರುವ ಸಾಧ್ಯತೆಯಾಗಿದೆ. ಸಹೋದರನ ಬಂಧನದಿಂದ ಸಂತೋಷಪಡುತ್ತಿರುವವರಿಗೆ ವಿಶೇಷವಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರಂತಹವರು ಗಮನಿಸಬೇಕು, ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ. ನಾವು ನಿಮ್ಮನ್ನು ಗಮನಿಸುತ್ತಿದ್ದೇವೆ.‘ನೀವು ಯಾಕೆ ದಾಳಿ ಮಾಡಿದ್ದೀರಿ?” ಎಂದು ಕೇಳುವವರಿಗೆ ನಾವು ಉತ್ತರಿಸಲು ಬಯಸುತ್ತೇವೆ. ಏಕೆಂದರೆ ನಾವು ಈ ಯುದ್ಧಕ್ಕೆ ಮತ್ತು ಫ್ಯಾಸಿಸ್ಟ್‌ಗಳ ಪ್ರತಿರೋಧದ ಹಾದಿಗೆ ಬಲವಂತದಿಂದ ಬಂದಿದ್ದೇವೆ. ರಾಜ್ಯದಲ್ಲಿರುವ ಭಯೋತ್ಪಾದನೆಯ ಕೆಟ್ಟ ರೂಪಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ. ನಮ್ಮ ಮೇಲೆ ಮುಕ್ತ ಸಮರ ಘೋಷಿಸಿರುವುದರಿಂದ, ಗುಂಪು ಹಲ್ಲೆಯು ಚಾಲ್ತಿಯಲ್ಲಿದೆ. ನಮ್ಮನ್ನು ಹತ್ತಿಕ್ಕಲು ಮತ್ತು ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡಲು ದಬ್ಬಾಳಿಕೆಯ ಕಾನೂನುಗಳು ಮತ್ತು ಅಂಥ ಕಾನೂನುಗಳನ್ನು ಜಾರಿಗೆ ತಂದಿರುವುದರಿಂದ, ನಮ್ಮ ಅಮಾಯಕರು ಜೈಲುಗಳಲ್ಲಿ ಕೊಳೆಯುತ್ತಿರುವ ಕಾರಣ ನಾವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ. ಏಕೆಂದರೆ ಸಾರ್ವಜನಿಕ ಸ್ಥಳಗಳು ನಮ್ಮ ನರಮೇಧದ ಕರೆಗಳೊಂದಿಗೆ ಪ್ರತಿಧ್ವನಿಸುತ್ತವೆ. ಮುಸ್ಲಿಮರಾಗಿ ನಾವು ಕಿಡಿಗೇಡಿತನ ಮತ್ತು ದಬ್ಬಾಳಿಕೆಯನ್ನು ಎದುರಿಸಿದಾಗ ಜಿಹಾದ್ ನಡೆಸಲು ಆದೇಶಿಸಲಾಗಿದೆ’ ಎಂದು ಹೇಳಿಕೆಯು ಮುಕ್ತಾಯಗೊಂಡಿದೆ.
ಹೇಳಿಕೆಯ ಹೊಣೆ:
ಹೇಳಿಕೆಯ ಕೊನೆಯಲ್ಲಿ ಮತ್ತೊಂದು ವಿಚಾರವನ್ನು ಉಗ್ರರು ಸ್ಪಷ್ಟಪಡಿಸಿದ್ದಾರೆ. ‘ಮುಂದೆ ಯಾವುದಾದರೂ ಕೃತ್ಯ ನಡೆದ ನಂತರವೇ ನಾವು ಹೇಳಿಕೆ ನೀಡುತ್ತೇವೆ. ನಮ್ಮ ಹೆಸರಿನಲ್ಲಿ ಬಿಡುಗಡೆಯಾಗುವ ಯಾವುದೇ ಹೇಳಿಕೆಯ ಹೊಣೆಯನ್ನು ನಾವು ಹೊರುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೇವಾಲಯ ಸ್ಫೋಟಕ್ಕೆ ಪಿತೂರಿ
ನಗರದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ.ಕುಕ್ಕರ್ ಬಾಂಬರ್ ಶಾರೀಕ್ ತಾನು ಮುಸ್ಲಿಮನಾಗಿದ್ದರೂ ಕುಕ್ಕೃತ್ಯಗಳನ್ನು ನಡೆಸಲು ಅಪ್ಪಟ ಹಿಂದೂ ವೇಶ ಹಾಕಿ ಡಿಪಿಯಲ್ಲಿ ಈಶ್ವರನ ಪೋಟೋ ಹಾಕಿಕೊಂಡು ಯಾರಿಗೂ ಅನುಮಾನ ಬಾರದಂತೆ ಹಿಂದೂಗಳ ರೀತಿ ವೇಷ ಧರಿಸಿ ಕರಾವಳಿ ಭಾಗದ ೩ ಪ್ರಸಿದ್ಧ ದೇವಾಲಯಗಳನ್ನು ಟಾರ್ಗೆಟ್ ಮಾಡಿಕೊಂಡ ಮಾಹಿತಿಯು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಶಾರೀಕ್ ಮೊಬೈಲ್‌ನಲ್ಲಿ ಯಾವ ಸ್ಥಳಗಳನ್ನು ಸರ್ಚ್ ಮಾಡಿದ್ದ ಎನ್ನುವುದು ಗೊತ್ತಾಗಿದೆ. ಸರ್ಕಾರಕ್ಕೆ ನೀಡಿದ ಪ್ರಾಥಮಿಕ ವರದಿಯಲ್ಲಿ ತನಿಖಾ ತಂಡ ಮೂರು ದೇವಸ್ಥಾನ ಮತ್ತು ಎರಡು ಸಾರ್ವಜನಿಕ ಸ್ಥಳದಲ್ಲಿ ಬಾಂಬ್ ಇಡಲು ಸಂಚು ಮಾಡಿದ್ದ ಎಂಬುದನ್ನು ಉಲ್ಲೇಖಿಸಿದೆ.ಎರಡು ಶಿವ ದೇವಸ್ಥಾನ, ಒಂದು ದೇವಿ ದೇವಸ್ಥಾನ, ಎರಡು ಸಾರ್ವಜನಿಕ ಸ್ಥಳ, ಒಂದು ಕಾರ್ಯಕ್ರಮ ಆತನ ಗುರಿಯಾಗಿತ್ತು ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.ಕದ್ರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ನಡೆಯಿತ್ತಿದೆ. ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.ಈ ಸಂದರ್ಭದಲ್ಲೇ ಸ್ಪೋಟ ಮಾಡುವ ಬಗ್ಗೆ ಸಂಚು ರೂಪಿಸಿರುವುದು ಗೊತ್ತಾಗಿದೆ.