ವಿಧ್ವಂಸಕ ಕೃತ್ಯಕ್ಕೆ ಬೆದರಿಕೆ ದೆಹಲಿಯಲ್ಲಿ ಕಟ್ಟೆಚ್ಚರ

ನವದೆಹಲಿ, ಆ.೧೪- ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಮತ್ತು ಕಟ್ಟೆಚ್ಚರ ವಹಿಸಲಾಗಿದೆ.
ದೆಹಲಿಯ ಶ್ರಮ ಶಕ್ತಿ ಭವನ, ಕಾಶ್ಮೀರ ಗೇಟ್, ಕೆಂಪು ಕೋಟೆ ಹಾಗೂ ಸರಿತಾ ವಿಹಾರ್ ಬಳಿ ಅಪರಿಚಿತ ಬ್ಯಾಗ್ ಇರಿಸಿ ಬಾಂಬ್ ಸ್ಪೋಟಿಸುವ ಬೆದರಿಕೆ ಹಾಕಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾಗ್ ಪತ್ತೆ ಹಚ್ಚಿ, ಎಲ್ಲೆಡೆ ಪೊಲೀಸರ ಸರ್ಪಗಾವಲು ಹಾಕಿದ್ದಾರೆ.
ಶ್ರಮ ಶಕ್ತಿ ಭವನದ ಬಳಿ ಹಾಕಿದ್ದ ಚೀಲದಲ್ಲಿ ಅನುಮಾನಾಸ್ಪದವಾದ ಯಾವುದೇ ವಸ್ತು ಏನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ಯಾಗ್ ಪರಿಶೀಲನೆ ನಡೆಸಿದ ಬಳಿಕ ಅದು ಎಲೆಕ್ಟ್ರಿಷಿಯನ್‌ಗೆ ಸೇರಿದ್ದು, ಬ್ಯಾಗನ್ನು ಆತನಿಗೆ ಹಸ್ತಾಂತರಿಸಲಾಗಿದೆ ಬ್ಯಾಗ್‌ನಲ್ಲಿ ವಿದ್ಯುತ್ ಕೆಲಸಗಳಿಗೆ ಬಳಸುವ ಉಪಕರಣಗಳಿದ್ದವು ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುಸಿ ಕರೆ:
ಈ ಬಾಂಬ್‌ಗಳ ಮಾಹಿತಿ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಆದರೆ, ಸ್ವಲ್ಪ ಸಮಯದ ನಂತರ ಎಲ್ಲವೂ ಬೋಗಸ್ ಕರೆಗಳು ಎಂದು ತಿಳಿದುಬಂದಿದೆ.
ತನಿಖೆ ನಡೆಸಿದ ಪೊಲೀಸರು ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಶ್ರಮ ಶಕ್ತಿ ಭವನದ ಬಳಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ಕಟ್ಟಚ್ಚರ:
ಐತಿಹಾಸಿಕ ಕೆಂಪುಕೋಟೆಯ ಮೇಲೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಂತತ್ರೋತ್ಸವದ ಧ್ವಜಾರೋಹಣ ಮಾಡಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದಂತೆ ವಿವಿಧ ಸ್ಥರಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ಪ್ರಮುಖ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟವಿ ಅವಳವಡಿಕೆ ಸೇರಿದಂತೆ ಮೆಟಲ್ ಡಿಟೆಕ್ಟರ್ ಸ್ಥಾಪಿಸಲಾಗಿದೆ. ಜೊತೆಗೆ ಪ್ರತಿಯೊಬ್ಬರ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.