ವಿಧ್ವಂಸಕ ಕೃತ್ಯಕ್ಕೆ ಉಗ್ರರ ಸಂಚು ಎಲ್ಲೆಡೆ ಕಟ್ಟೆಚ್ಚರ

ಕೆಂಪುಕೋಟೆಗೆ ಕಣ್ಗಾವಲು

ನವದೆಹಲಿ, ಆ. ೪- ಸ್ವಾತಂತ್ರ್ಯ ದಿನೋತ್ಸವದಂದು ಭಯೋತ್ಪಾದಕರು ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಪಿತೂರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ಲಷ್ಕರ್-ಇ- ತೊಯ್ಬಾ, ಜೆಇಎಂ ಮತ್ತು ಇತರ ಮೂಲಭೂತವಾದಿ ಗುಂಪುಗಳಿಂದ ದಾಳಿ ನಡೆಸುವ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ೧೦ ಪುಟಗಳ ವರದಿಗಳನ್ನು ಕೇಂದ್ರ ಗೃಹ ಇಲಾಖೆ ರವಾನಿಸಿದೆ.
ಜಪಾನ್ ಮಾಜಿ ಪ್ರಧಾನಿ ಶಿಂಜೋ ಆಬೆ ಮೇಲಿನ ದಾಳಿ ಮತ್ತು ಉದಯಪುರ, ಅಮರಾವತಿನಲ್ಲೂ ನಡೆದ ಘಟನೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆ. ೧೫ರ ಸ್ವಾತಂತ್ರ ದಿನಾಚರಣೆಯ ಮೊದಲು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಕಟ್ಟುನಿಟ್ಟಾದ ಪ್ರವೇಶ ನಿಯಮಗಳನ್ನು ಜಾರಿಗೆ ತರುವಂತೆ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಕೆಂಪುಕೋಟೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಧಿಕ ಉನ್ನತ ತಂತ್ರಜ್ಞಾನದ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ.
ಕೆಂಪುಕೋಟೆಯ ಸುತ್ತಲೂ ಐಪಿ ಆಧಾರಿತ ಎರಡು ಮೆಗಾ ಪಿಕ್ಸಲ್‌ನ ಶೇ. ೮೦ ರಷ್ಟು ಸಿಸಿಟಿವಿ ಕ್ಯಾಮರಾಗಳು ಮತ್ತು ೪ ಮೇಗಾ ಪಿಕ್ಸಲ್ ಶೇ. ೨೦ ರಷ್ಟು ಸಿಸಿಟಿವಿ ಗಳನ್ನು ಪ್ರತಿಯೊಂದು ಮೂಲೆಯಲ್ಲೂ ಅಳವಡಿಸಲಾಗುತ್ತಿದೆ.
ಉದಯಪುರ ಮತ್ತು ಅಮರಾವತಿಯಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಗುಪ್ತಚರ ಸಂಸ್ಥೆಗಳು ಜನನಿಬಿಡ ಸ್ಥಳಗಳಲ್ಲಿ ಹಾಗೂ ಆಯಾ ಕಟ್ಟಿನ ಪ್ರದೇಶಗಳಲ್ಲಿ ನಿಗಾವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಗುಪ್ತಚರ ಸಂಸ್ಥೆ ನೀಡಿರುವ ವರದಿಯಲ್ಲಿ ಪಾಕಿಸ್ತಾನದ ಐಎಸ್‌ಐ ಜೈಶ್ ಮತ್ತು ಲಷ್ಕರ್ ಭಯೋತ್ಪಾದಕರಿಗೆ ಬೆಂಬಲ ನೀಡುವ ಮೂಲಕ ವಿಧ್ವಂಸಕ ಕೃತ್ಯಗಳನ್ನು ನಡೆಸುವಂತೆ ಪ್ರಚೋದಿಸುತ್ತಿದೆ. ಹಿರಿಯ ನಾಯಕರು ಪ್ರಮುಖ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿದೆ.
ರಾಜಧಾನಿ ದೆಹಲಿ, ಮುಂಬೈ, ಕೊಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪೊಲೀಸ್ ಭದ್ರತೆಯೂ ಹೆಚ್ಚಿಸಲಾಗಿದ್ದು, ವಾಹನ ತಪಾಸಣೆ ಕಾರ್ಯ ಚುರುಕುಗೊಳಿಸಲಾಗಿದೆ.

ರಾಜ್ಯದಲ್ಲೂ ಕಟ್ಟೆಚ್ಚರ
ಕರ್ನಾಟಕದಲ್ಲೂ ಸ್ವಾತಂತ್ರ ದಿನಾಚರಣೆಗೂ ಮುನ್ನ ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.ಪ್ರಮಖವಾಗಿ ಮಂಗಳೂರು, ಉಡುಪಿ, ಕಾರವಾರ, ಮಡಿಕೇರಿ, ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.ಕೇಂದ್ರ ಗೃಹ ಇಲಾಖೆಯಿಂದ ವರದಿ ರವಾನಿಯಾಗಿರುವ ಹಿನ್ನೆಲೆಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಕೆಲವು ಸಮಾಜ ಘಾತುಕ ಶಕ್ತಿಗಳು ದಾಳಿ ನಡೆಸಲು ಪಿತೂರಿ ನಡೆಸಿದೆ. ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇಡಬೇಕು ಎಂದು ಗುಪ್ತಚರ ಇಲಾಖೆ ಸೂಚನೆ ನೀಡಿದೆ.ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ, ರಾಜಭವನ, ಪ್ರಮುಖ ಸರ್ಕಾರಿ ಕಟ್ಟಡಗಳು, ಮೆಟ್ರೋ ರೈಲ್ವೆ ನಿಲ್ದಾಣ, ಪ್ರಮುಖ ಜಲಾಶಗಳಿಗೂ ಭದ್ರತೆ ಕೈಗೊಳ್ಳಬೇಕೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದು, ಯಾವುದೇ ಕಾರಣಕ್ಕೂ ಲೋಪವಾಗಬಾರದು ಎಂದು ತಾಕೀತು ಮಾಡಿದ್ದಾರೆ.