ವಿಧ್ಯಾರ್ಥಿಗಳನ್ನು ಹೃದಯ ಶ್ರೀಮಂತರನ್ನಾಗಿಸಿ-ದೇಸಾಯಿ

ಧಾರವಾಡ ಜ.13: ಶಿಕ್ಷಣವು ಕೇವಲ ವಿಷಯವನ್ನು ಕಲಿಸುವ ಪ್ರಕ್ರಿಯೆ ಮಾತ್ರ ಆಗದೇ ವಿದ್ಯಾರ್ಥಿಗಳನ್ನು ಹೃದಯ ಶ್ರೀಮಂತರನ್ನಾಗಿ ಮಾಡಬೇಕು ಎಂದು ಮುಖ್ಯಾಧ್ಯಾಪಕ ಎಂ.ಎಸ್. ದೇಸಾಯಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಎನ್. ಎಚ್. ದೇಸಾಯಿ (ನಾನಪ್ಪ ಮಾಸ್ತರ) ದತ್ತಿ ಅಂಗವಾಗಿ ಆಯೋಜಿಸಿದ್ದ `ಮಕ್ಕಳ ಗಾಯನ’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಕೇವಲ ಪುಸ್ತಕ ಅಧ್ಯಯನದಿಂದ ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ಅರಳದು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದಾಗ ಮಾತ್ರ ಸಮಾಜಮುಖಿಯಾಗಿ, ಸರ್ವತೋಮುಖವಾಗಿ ಬೆಳೆಯಲು ಸಾಧ್ಯ. ಕಲಿಕೆ ಸಂತಸದಾಯಕವಾಗಲು ವಿದ್ಯಾರ್ಥಿಗಳಿಗೆ ಬದುಕುವ ಕಲೆ ಕರಗತ ಮಾಡಬೇಕು. ಮಕ್ಕಳ ಆಸಕ್ತಿ, ಅಭಿರುಚಿಯನ್ನು ಗಮನಿಸಿ ಶಿಕ್ಷಕರು ಹಾಗೂ ಪಾಲಕರು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರ ಆಪ್ತ ಸಹಾಯಕರಾದ ಶಿವಣ್ಣ ಅಂಗಡಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸುಮ್ಮನ್ನೆ ಬರುವುದಿಲ್ಲಾ, ಅದಕ್ಕೆ ನಿರಂತರ ಪ್ರಯತ್ನ ಬೇಕು. ಇಂತಹ ಪ್ರಯತ್ನದಿಂದ ಮಾತ್ರ ವಿದ್ಯಾರ್ಥಿಗಳು ಸಾಧಕರಾಗಬಹುದು. ಶಾಲೆಯಲ್ಲಿ ಕಲಿತ ವಿದ್ಯೆಯು ನಿಮ್ಮ ಭವಿಷ್ಯಕ್ಕೊಂದು ಬುನಾದಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಿ. ಎನ್. ಎಚ್. ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ) ಹಾಗೂ ಡಾ. ಶರಣಕುಮಾರ್ ಮೇಡೆದಾರ ಉಪಸ್ಥಿತರಿದ್ದರು. ನಿವೃತ್ತ ಮುಖ್ಯಾಧ್ಯಾಪಕ ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ನಿರೂಪಿಸಿದರು ಹಾಗೂ ಮಹಾಂತೇಶ ನರೇಗಲ್ಲ ವಂದಿಸಿದರು.
ಶ್ರೀ ವೀಣಾವಾಣಿ ಸಂಗೀತ ಮಹಾವಿದ್ಯಾಲಯ(ರಿ) ಧಾರವಾಡ ವಿದ್ಯಾರ್ಥಿ ಮಕ್ಕಳು ವಿವಿಧ ಹಾಡುಗಳ ಮೂಲಕ ಗಾಯನ ಪ್ರಸ್ತುತಪಡಿಸಿ, ನೆರೆದ ಸಭಿಕರ ಮನಗೆದ್ದರು. ಇವರಿಗೆ ಸುರೇಶ ನಿಡಗುಂದಿ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಗಾಮನಗಟ್ಟಿ, ಹಾಗೂ ನಿಂಗಪ್ಪ ಮಾಯಕೊಂಡ, ಶ್ರೀಮತಿ ಮೇಘಾ ಹುಕ್ಕೇರಿ, ಚನಬಸಪ್ಪ ಅವರಾದಿ, ಹಾಗೂ ದೇಸಾಯಿ ಪರಿವಾರದವರು, ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.